ಕಳಸ: ಸಮಸ್ಯೆಗೆ ಸ್ಪಂದಿಸದ ಶಾಸಕರು, ಅಧಿಕಾರಿಗಳು; ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ ನಿವೇಶನ ರಹಿತರು

Update: 2020-02-11 17:11 GMT

ಚಿಕ್ಕಮಗಳೂರು, ಫೆ.11: ಕಳಸ ಗ್ರಾಪಂ ವ್ಯಾಪ್ತಿಯಲ್ಲಿರುವ ಹಿನಾರಿ ಗ್ರಾಮದಲ್ಲಿ ಕಳಸ ಗ್ರಾಪಂ ಹಾಗೂ ಮೂಡಿಗೆರೆ ಶಾಸಕ ಕುಮಾರಸ್ವಾಮಿ ನಿವೇಶನ ಕಲ್ಪಿಸಲು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಆರೋಪಿಸಿ ನೂರಕ್ಕೂ ಹೆಚ್ಚು ನಿವೇಶನ ರಹಿತರು ರವಿವಾರ ರಾತ್ರಿ ದಿಢೀರ್ ಗುಡಿಸಲು ನಿರ್ಮಿಸಿಕೊಂಡು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಮೂಡಿಗೆರೆಯ ಕಳಸ ಗ್ರಾಪಂ ವ್ಯಾಪ್ತಿಯಲ್ಲಿರುವ ಹಿನಾರಿ, ಕಲ್ಲಾಟಗುಡ್ಡ, ಕಲ್ಮಕ್ಕಿ, ಗಂಗನಕೂಡಿಗೆರೆ ಮೊದಲಾದ ಗ್ರಾಮಗಳಲ್ಲಿರುವ ಸುಮಾರು 110 ನಿವೇಶನ ರಹಿತರ ಕುಟುಂಬಗಳು ಸಾಮಾಜಿಕ ಕಾರ್ಯಕರ್ತ ಲಿಂಗಪ್ಪ ಅವರ ನೇತೃತ್ವದಲ್ಲಿ ಪಟ್ಟಣ ಸಮೀಪದಲ್ಲಿರುವ ಹಿನಾರಿ ಗ್ರಾಮದ ಗೋಮಾಳ ಜಾಗದಲ್ಲಿ ದಿಢೀರ್ ಆಗಿ ಗುಡಿಸಲು ನಿರ್ಮಿಸಿದ್ದಾರೆ.

ಸುದ್ದಿ ತಿಳಿದ ಅರಣ್ಯ ಇಲಾಖಾಧಿಕಾರಿಗಳು ಸಂಜೆ ಸ್ಥಳಕ್ಕೆ ಆಗಮಿಸಿ ಗುಡಿಸಲು ತೆರವು ಮಾಡಲು ಸೂಚಿಸಿದ್ದಾರೆಂದು ತಿಳಿದು ಬಂದಿದ್ದು, ಇದಕ್ಕೆ ನಿವೇಶನ ರಹಿತರು ಒಪ್ಪದಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿಯೇ ಗುಡಿಸಲುಗಳ ತೆರವಿಗೆ ಮುಂದಾಗಿದ್ದಾರೆ. ಈ ವೇಳೆ ಸಿಬ್ಬಂದಿ ಗುಡ್ಡದಲ್ಲಿದ್ದ ಕೆಲ ಗುಡಿಸಲುಗಳನ್ನು ಕಿತ್ತುಹಾಕಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರು ಇದನ್ನು ಪ್ರಶ್ನಿಸಿದಾಗ ಇಲಾಖೆ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲೇ ಸ್ಥಳದಲ್ಲಿದ್ದ ಮಹಿಳೆಯರನ್ನು ನಿಂದಿಸಿ ದೌರ್ಜನ್ಯ ಎಸಗಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಹಾಗೂ ಸ್ಥಳೀಯ ಮುಖಂಡ ಲಿಂಗಪ್ಪ ಆರೋಪಿಸಿದ್ದಾರೆ.

ಕಳಸ ಪಟ್ಟಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ನಿವೇಶನ ಸಮಸ್ಯೆಗಳ ಬಗ್ಗೆ ನೂರಾರು ಅರ್ಜಿಗಳು ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿವೆ. ಗ್ರಾಪಂ ಸದಸ್ಯರು ನಿವೇಶನ ಜಾಗದ ಸಮಸ್ಯೆಗಳನ್ನು ಡಿಸಿ ಹಾಗೂ ಉಸ್ತುವಾರಿ ಸಚಿವರ ಹಾಗೂ ಮೂಡಿಗೆರೆ ಶಾಸಕರ ಗಮನಕ್ಕೆ ತಂದಿದ್ದು, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದು, ಅಧಿಕಾರಿಗಳಿಗೆ, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಿವೇಶನ ರಹಿತರು ಈ ವೇಳೆ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News