ಗಾರ್ಗಿ ಕಾಲೇಜು ವಿದ್ಯಾರ್ಥಿನಿಯರ ಮೇಲಿನ ಹಲ್ಲೆಗೆ ಖಂಡನೆ
ಬೆಂಗಳೂರು, ಫೆ. 11: ಹೊಸದಿಲ್ಲಿಯ ಗಾರ್ಗಿ ಮಹಿಳಾ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಾರಂಭ ನಡೆಯುತ್ತಿದ್ದ ವೇಳೆ ಯುವಕರ ಗುಂಪೊಂದು ಕಾಲೇಜಿನ ಒಳಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ಹಲ್ಲೆ ನಡೆಸಿರುವುದನ್ನು ಎಐಎಂಎಸ್‌ಎಸ್ ತೀವ್ರವಾಗಿ ಖಂಡಿಸಿದೆ.
ವಿದ್ಯಾರ್ಥಿನಿಯರನ್ನು ಶೌಚಾಲಯದ ಕೊಠಡಿಯಲ್ಲಿ ಕೂಡಿಹಾಕಿ ಅನುಚಿತ, ಅಸಭ್ಯವಾಗಿ ವರ್ತಿಸಿದ್ದು, ಕಾಲೇಜು ಪಕ್ಕದಲ್ಲೇ ಸಿಎಎ ಪರ ರ‍್ಯಾಲಿ ಸಂಘಟಿಸಿದ್ದ ವೇಳೆ ಪಾನಮತ್ತರಾಗಿದ್ದ ಅಲ್ಲಿನ ಗುಂಪು ಕಾಲೇಜಿನ ಒಳಗೆ ನುಗ್ಗಿ ಈ ಕೃತ್ಯ ನಡೆಸಿದ್ದಾಗಿ ಪ್ರತ್ಯಕ್ಷದರ್ಶಿ ವಿದ್ಯಾರ್ಥಿನಿಯರು ಹೇಳಿದ್ದಾರೆ. ಈ ಘಟನೆಯನ್ನು ಖಂಡಿಸಿ ಪ್ರತಿಭಟಿಸಿ ದೂರು ನೀಡಿದರೂ ಕಾಲೇಜು ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಲಾಗಿದೆ.
ಈ ಘಟನೆಯನ್ನು ತನಿಖೆಗೊಳಪಡಿಸಿ ತಪ್ಪಿತಸ್ಥರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತದೆ. ಗಾರ್ಗಿ ವಿದ್ಯಾರ್ಥಿನಿಯರ ರಕ್ಷಣೆ, ಭದ್ರತೆಗೆ ಆಸ್ಪದ ನೀಡದೆ ಲಘುವಾಗಿ ಹೇಳಿಕೆ ನೀಡಿದ ಪ್ರಾಂಶುಪಾಲರು ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಎಐಎಂಎಸ್ ಆಗ್ರಹಿಸಿದೆ.
ಇಂತಹ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲೇ ಇದ್ದ ಪೋಲೀಸ್ ಸಿಬ್ಬಂದಿಗಳು ಯಾವುದೇ ಮುನ್ನೆಚ್ಚರಿಕೆ ವಹಿಸದೆ ಬೇಜವಾಬ್ದಾರಿ ತೋರಿರುವುದು ಸಲ್ಲ ಎಂದು ಆಕ್ಷೇಪಿಸಿರುವ ಸಮಿತಿ ಕಾರ್ಯದರ್ಶಿ ಶಾಂತಾ, ಇಂತಹ ಘಟನೆಗಳ ವಿರುದ್ಧ ಮಹಿಳೆಯರು ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.