ಸೂಕ್ತ ಉದ್ಯೋಗ ದೊರೆತಾಗ ಮಾತ್ರ ಶಿಕ್ಷಣ ಸಾರ್ಥಕ: ಸಚಿವ ಹೆಚ್.ನಾಗೇಶ್

Update: 2020-02-11 17:45 GMT

ಕೋಲಾರ, ಫೆ.11: ಉದ್ಯೋಗಕ್ಕಾಗಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರತಿನಿತ್ಯ ಓಡಾಡುವುದನ್ನು ತಪ್ಪಿಸಿ, ಸ್ಥಳೀಯವಾಗಿ ಉದ್ಯೋಗ ಸೃಷ್ಠಿ ಮಾಡಲು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಸೂಕ್ತ ಉದ್ಯೋಗ ದೊರೆತಾಗ ಮಾತ್ರ ಯುವಜನತೆ ಗಳಿಸಿದ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ಅಬಕಾರಿ, ಕೌಶಲ್ಯ ಮತ್ತು ಸಂವಹನ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ನಾಗೇಶ್ ಅಭಿಪ್ರಾಯಪಟ್ಟರು.

ಇಂದು ಕೋಲಾರ ನಗರದ ಹೊರವಲಯದಲ್ಲಿರುವ ಸಿ.ಭೈರೇಗೌಡ ತಾಂತ್ರಿಕ ವಿದ್ಯಾಸಂಸ್ಥೆ (ಸಿ.ಬಿ.ಐ.ಟಿ) ಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯೋಗ ಮೇಳದಲ್ಲಿ ಸುಮಾರು 308 ಪ್ರತಿಷ್ಠಿತ ಕಂಪೆನಿಗಳು ಹಾಗೂ 15 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, ಉದ್ಯೋಗಾಕಾಂಕ್ಷಿಗಳು ಗಾಬರಿಗೊಳ್ಳದೇ, ದುಡುಕದೇ ಸಾವಕಾಶವಾಗಿ ಸಂದರ್ಶನ ನೀಡಿ ಉದ್ಯೋಗಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜನಸಂಖ್ಯೆಗೆ ಅನುಗುಣವಾಗಿ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಠಿಯಾಗಬೇಕಿರುವ ಹಿನ್ನಲೆಯಲ್ಲಿ, ಮುಳಬಾಗಿಲಿನಲ್ಲಿ 1,650 ಎಕರೆಯಷ್ಟು ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಿ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೋಲಾರದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಯೋಚಿಸಿದ್ದು, ಇದಕ್ಕಾಗಿ ಅಗತ್ಯ ಪ್ರಮಾಣದಲ್ಲಿ ಭೂಮಿಯನ್ನು ಮಂಜೂರು ಮಾಡಿಕೊಡಲು ಸಿದ್ಧವಾಗಿದ್ದೇವೆ ಎಂದು ಸಚಿವರು ತಿಳಿಸಿದರು.

ಎರಡು ದಿನಗಳ ಈ ಉದ್ಯೋಗ ಮೇಳವನ್ನು ಜಿಲ್ಲಾಡಳಿತ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದ್ದು, ವಿದ್ಯಾರ್ಹತೆ ಅನುಗುಣವಾಗಿ ಪ್ರತ್ಯೇಕ ಬಣ್ಣದ ನೋಂದಣಿ ಕಾರ್ಡ್‍ಗಳನ್ನು ನೀಡಿ ಸಂದರ್ಶನ ಪ್ರಕ್ರಿಯೆ ಸುಲಲಿತವಾಗಿ ನಡೆಯಲು ಕ್ರಮವಹಿಸಿದೆ ಎಂದು ಶ್ಲಾಘಿಸಿದರು. ಆನ್ ಲೈನ್ ಹಾಗೂ ಸ್ಥಳದಲ್ಲೇ ನೋಂದಣಿಯಾದ ಹಲವಾರು ಉದ್ಯೋಗಾಕಾಂಕ್ಷಿಗಳಿಗೆ ಸ್ಥಳದಲ್ಲೇ ಕೆಲವು ಕಂಪನಿಗಳ ನೇಮಕಾತಿ ಪತ್ರವನ್ನು ಸಚಿವರು ನೀಡಿದರು. 

ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಜೆ ಮಂಜುನಾಥ್, ಈ ಎರಡು ದಿನದ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ನಿರುದ್ಯೋಗಿ ಯುವಕ ಯುವತಿಯರಿಗೆ ಈಗಾಗಲೇ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಂದೊಂದು ದಿನದ ಸಂವಹನ ಕೌಶಲ್ಯ ಹಾಗೂ ವೃತ್ತಿ ಕೌಶಲ್ಯ ಕುರಿತು ತರಬೇತಿಯನ್ನು ನೀಡಲಾಗಿದೆ. ವಿಶೇಷ ಚೇತನರಿಗೆ ಕೂಡ ಮೇಳದಲ್ಲಿ ಪ್ರತ್ಯೇಕ ಮಳಿಗೆಯನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. 

ಐಟಿ, ಉತ್ಪಾದನಾ, ರೀಟೇಲ್ ಮಾರ್ಕೆಟಿಂಗ್, ಟೆಲಿಕಾಂ, ಬಿಪಿಒ, ಜವಳಿ, ಆಟೋಮೊಬೈಲ್, ಬ್ಯಾಂಕಿಂಗ್, ವಿಮೆ, ವೈದ್ಯಕೀಯ ಸೇರಿದಂತೆ ಹಲವಾರು ವಿವಿಧ ಉದ್ದಿಮೆಗಳ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ ಎಂದ ಅವರು, ಸುಮಾರು 400 ಕಂಪನಿಗಳಿಗೆ ಮೇಳದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿತ್ತು. ಪ್ರಸ್ತುತ 308 ಕಂಪನಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದು, ಇನ್ನು ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ರೀತಿಯ ಉದ್ಯೋಗ ಕಾರ್ಡ್‍ಗಳನ್ನು ನೀಡಲಾಗಿದ್ದು, ಅದರಂತೆ ಸೂಕ್ತ ಕಂಪನಿಗಳ ಮಳಿಗೆಗಳಲ್ಲಿ ಉದ್ಯೋಗಾಕಾಂಕ್ಷಿಗಳು ಮಾಹಿತಿಯನ್ನು ಪಡೆದು ಸಂದರ್ಶನ ಅಥವಾ ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಪಡೆದುಕೊಳ್ಳಬಹುದು. ಅಪ್ರೆಂಟಿಸ್ ತರಬೇತಿ ನೀಡುವ ಸಂಸ್ಥೆಗಳೂ ಸಹ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ಎರಡೂ ದಿನ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. 

ಕೋಲಾರ ಶಾಸಕರಾದ ಕೆ ಶ್ರೀನಿವಾಸಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲ ವಲಯದ ಕೈಗಾರಿಕೆಗಳು ಸಿಎಸ್‍ಆರ್ ನಿಧಿಯಡಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಪಾತ್ರವಹಿಸಿದ್ದಾರೆ ಎಂದ ಅವರು, ಉದ್ಯೋಗ ಮೇಳದಲ್ಲಿ ಜಿಲ್ಲೆಯ ನಿವಾಸಿಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೋರಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಉಪಾಧ್ಯಕ್ಷ ಯಶೋದ ಕೃಷ್ಣಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಸೇರಿದಂತೆ ವಿವಿಧ ಕೈಗಾರಿಕಾ ಸಂಘಗಳ ಮುಖ್ಯಸ್ಥರು, ರಾಜ್ಯ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News