×
Ad

ಬಿಜೆಪಿ ಹಿತಕ್ಕಾಗಿ ಮೌನವಾಗಿದ್ದೇನೆ: ಮಹೇಶ್ ಕುಮಟಳ್ಳಿ

Update: 2020-02-11 23:17 IST

ಬೆಳಗಾವಿ, ಫೆ.11: ಸಚಿವ ಸ್ಥಾನ ಸಿಗದಿದ್ದರೂ ಪಕ್ಷದ ಹಿತಾಸಕ್ತಿಗಾಗಿ ಮೌನವಾಗಿದ್ದೇನೆ. ನನಗೆ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಕೊಡುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೆ ನಿಗಮ ಮಂಡಳಿ ಕೊಡುವುದಾಗಿ ಭರವಸೆ ನೀಡಿದ್ದಾರೆಂದು ಸಚಿವ ಸ್ಥಾನದ ಆಕಾಂಕ್ಷಿ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.

ಮಂಗಳವಾರ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 30 ವರ್ಷ ಕಾಂಗ್ರೆಸ್‌ನಲ್ಲಿದ್ದೆ. ಈಗ ಮುಂದಿನ ಮೂವತ್ತು ವರ್ಷ ಬಿಜೆಪಿಯಲ್ಲಿರುತ್ತೇನೆ. ಬಂಡಾಯ ಎನ್ನುವುದು ಹಗುರವಾದ ಕೆಲಸ ಅಲ್ಲ. ನನಗೆ ಬಂಡಾಯ ಅಂದಾಗ ಕಳೆದ 15 ತಿಂಗಳ ಅನುಭವ ನೆನಪಾಗುತ್ತದೆ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ಎಂಎಸ್‌ಐಎಲ್ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿರುವುದು ತಿಳಿದಿದೆ. ಆದರೆ, ನಾನು ಬಿಇ ಸಿವಿಲ್ ಇಂಜಿನಿಯರಿಂಗ್ ಓದಿರುವುದರಿಂದ, ನನಗೆ ಲ್ಯಾಂಡ್ ಆರ್ಮಿ ಕೊಟ್ಟರೆ ಸೂಕ್ತ ಎನ್ನುವ ಭಾವನೆ ನನ್ನದು. ಈ ಬಗ್ಗೆ ಮಾತನಾಡುತ್ತೇನೆಂದು ಅವರು ಹೇಳಿದರು.

ಬಿಜೆಪಿಯಲ್ಲಿ ಮೂಲ ಬಿಜೆಪಿಗರು ಮತ್ತು ವಲಸಿಗರು ಎನ್ನುವ ಭಿನ್ನಾಭಿಪ್ರಾಯ ಇಲ್ಲ. ಖಾತೆ ಹಂಚಿಕೆ ವೇಳೆ ಕೆಲವು ತೊಂದರೆ ಉಂಟಾಗಿ ನನಗೆ ತಾಳ್ಮೆಯಿಂದ ಇರುವಂತೆ ಹೇಳಿದ್ದರಿಂದ ಮೌನ ವಹಿಸಿದ್ದೇನೆ. ಅಥಣಿ ಮತಕ್ಷೇತ್ರದ ಜನ ಜಾತ್ಯತೀತವಾಗಿ ನನಗೆ ಮತ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News