ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನಾಳೆ 'ಕರ್ನಾಟಕ ಬಂದ್‌'

Update: 2020-02-12 12:14 GMT

ಬೆಂಗಳೂರು, ಫೆ.12: ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಡಾ.ಸರೋಜಿನಿ ಮಹಿಷಿ ವರದಿಗೆ ಜಾರಿಗೆ ಒತ್ತಾಯಿಸಿ ಫೆ.13ರಂದು(ಗುರುವಾರ) ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ರಾಜ್ಯ ಬಂದ್ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಡೆಯಲಿದೆ.

ಕರ್ನಾಟಕ ಬಂದ್‌ನ್ನು ಬೆಂಬಲಿಸಿ ಆಯಾ ಜಿಲ್ಲೆಗಳಲ್ಲಿ ಕನ್ನಡಪರ, ದಲಿತ ಹಾಗೂ ಕಾರ್ಮಿಕರ ಪರ ಸಂಘಟನೆಗಳು ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ. ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ 11ಗಂಟೆಗೆ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ನಾಗೇಶ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 11 ಸಾವಿರ ಗಾರ್ಮೆಂಟ್ಸ್ ಕಾರ್ಖಾನೆಗಳು ಸಂಪೂರ್ಣ ಬಂದ್ ಆಗಲಿದ್ದು, ನಮ್ಮ ಹೋರಾಟಕ್ಕೆ ಹೆಚ್ಚಿನ ಸ್ಥೈರ್ಯ ನೀಡುತ್ತಿವೆ. ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನಾ ರ‍್ಯಾಲಿಯಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಮಾಹಿತಿ ನೀಡಿದರು.

ಲಾರಿ ಮಾಲಕರ ಸಂಘ, ಓಲಾ ಮತ್ತು ಊಬರ್ ಚಾಲಕರ ಸಂಘ, ಬೀದಿ ಬದಿ ವ್ಯಾಪಾರಿಗಳು, ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘ, ಆದರ್ಶ ಆಟೋ ಯೂನಿಯನ್, ಪೀಸ್ ಆಟೋ ಯೂನಿಯನ್, ಜೈ ಭಾರತ ಚಾಲಕರ ಸಂಘ, ಸಾರಥಿ ಸೇನೆ ಸೇರಿದಂತೆ 750 ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ ಎಂದು ಅವರು ತಿಳಿಸಿದರು.

ಕೆಎಸ್ಸಾರ್ಟಿಸಿ ಎಂದಿನಂತೆ ಕಾರ್ಯಾಚರಣೆ: ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ರಾಜ್ಯ ಬಂದ್‌ನಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ನೌಕರರು ಭಾಗವಹಿಸುವುದಿಲ್ಲವೆಂದು ಹೇಳಿದ್ದಾರೆ. ಹೀಗಾಗಿ ಸಾರಿಗೆ ಬಸ್‌ಗಳ ಎಂದಿನಂತೆ ಸಂಚರಿಸುತ್ತವೆ. ನೌಕರರು ಅನಗತ್ಯ ರಜೆ ಹಾಕದಂತೆ ಎಚ್ಚರಿಕೆ ನೀಡಿದ್ದು, ಅನುಮತಿಯಿಲ್ಲದೆ ಗೈರಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಸಾಟಿರ್ಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ.

ಹೊಟೇಲ್‌ಗಳ ಬೆಂಬಲವಿಲ್ಲ: ಬೃಹತ್ ಬೆಂಗಳೂರು ಹೊಟೇಲ್‌ಗಳ ಸಂಘ ಬಂದ್‌ಗೆ ಬೆಂಬಲ ನೀಡಿಲ್ಲ. ಗ್ರಾಹಕರ ಹಿತದೃಷ್ಟಿಯಿಂದ ಹೊಟೇಲ್ ತರೆಯಲಾಗುತ್ತದೆ. ಈ ಬಗ್ಗೆ ನಗರದ ಜನತೆ ಆತಂಕ ಪಡುವ ಅಗತ್ಯವಿಲ್ಲವೆಂದು ಸಂಘದ ಅಧ್ಯಕ್ಷ ಪಿ.ಸಿ.ರಾವ್ ಸ್ಪಷ್ಟಪಡಿಸಿದ್ದಾರೆ.

ನೈತಿಕ ಬೆಂಬಲ: ರಾಜ್ಯ ಬಂದ್‌ಗೆ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ನೈತಕ ಬೆಂಬಲ ನೀಡುತ್ತಿದ್ದು, ಆದರೆ, ರೋಗಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ಪತ್ರೆ, ಮೆಡಿಕಲ್ ಶಾಪ್‌ಗಳು ಎಂದಿನಂತೆ ತೆರೆದಿರುತ್ತದೆ ಎಂದು ವೆಂಕಟಾಚಲಪತಿ ಮಾಹಿತಿ ನೀಡಿದ್ದಾರೆ.

ಶಾಲಾ ಕಾಲೇಜು ರಜೆ ಇಲ್ಲ

ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಯಾವುದೇ ಶಾಲಾ- ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಣೆ ಮಾಡುವುದಿಲ್ಲ. ಆದಾಗ್ಯೂ ಆಯಾ ಜಿಲ್ಲಾಡಳಿತಗಳು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಕ್ರಮ ವಹಿಸಬಹುದಾಗಿದೆ.

-ಸುರೇಶ್‌ ಕುಮಾರ್, ಶಿಕ್ಷಣ ಸಚಿವ

ಸಂಚಾರ ಯಥಾಸ್ಥಿತಿ

‘ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಾಳೆ (ಫೆ.13) ಕರೆ ನೀಡಿರುವ ಬಂದ್ ವೇಳೆ ಸಾರಿಗೆ ವಾಹನಗಳ ಸಂಚಾರಕ್ಕೆ ಅಡಚಣೆ ಇಲ್ಲ. ಎಂದಿನಂತೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿ ಸಾರಿಗೆ ವಾಹನಗಳ ಸಂಚಾರ ಇರಲಿದೆ. ಬಂದ್ ಪರಿಸ್ಥಿತಿ ನೋಡಿಕೊಂಡು ಅಧಿಕಾರಿಗಳು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ’

-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

‘ಸರೋಜಿನಿ ಮಹಿಷಿ ವರದಿಯ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಅದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಪರಿಷ್ಕೃರಣೆ ಮಾಡಿಸಿ ವರದಿ ತರಿಸಿದ್ದೆ. ಅದರ ಅನುಷ್ಠಾನದ ಪರವಾದ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಕನ್ನಡಿಗರ ಬೇಡಿಕೆ ನ್ಯಾಯಯುತವಾಗಿದೆ. ವರದಿ ಜಾರಿಯಾಗುವವರೆಗೆ ಹೋರಾಟ ಅನಿವಾರ್ಯವಾಗಿದೆ. ನಾಡುನುಡಿಯ ವಿಷಯ ಬಂದಾಗ ನಾಡಿನ ಪರವಾಗಿ ನಿಲ್ಲಬೇಕಾದದ್ದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ’

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News