'ಕರ್ನಾಟಕ ಬಂದ್‌ಗೆ ಸಿದ್ದರಾಮಯ್ಯ ಬೆಂಬಲ'ದ ಬಗ್ಗೆ ಸಿ.ಟಿ.ರವಿ ಪ್ರತಿಕ್ರಿಯೆ

Update: 2020-02-12 12:13 GMT

ಬೆಂಗಳೂರು, ಫೆ. 12: ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಸಂಬಂಧದ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ‘ಕರ್ನಾಟಕ ಬಂದ್’ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲ ನೀಡಿರುವುದು ಹಾಸ್ಯಾಸ್ಪದ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಷಿ ವರದಿ ಮಂಡನೆ ದಿನ ಸಿದ್ದರಾಮಯ್ಯ ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆ ವೇಳೆ ವರದಿ ಜಾರಿಗೆ ಪ್ರಯತ್ನ ಮಾಡಲಿಲ್ಲ. ಇದೀಗ ಅಧಿಕಾರದಿಂದ ಕೆಳಗಿಳಿದ ಬಳಿಕ ಅವರು ವರದಿ ಜಾರಿಗೆ ಒತ್ತಾಯ ಮಾಡುತ್ತಿದ್ದಾರೆಂದು ಟೀಕಿಸಿದರು.

ಆಡಳಿತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ಮಾಡಲಾಗಿದೆ. ಸರೋಜಿನಿ ಮಹಿಷಿ ವರದಿ ಜಾರಿಗೆ ರಾಜ್ಯ ಸರಕಾರ ಬದ್ಧ. ಆದರೆ, ನಮ್ಮದು ಸೋಗಲಾಡಿತನದ ಬದ್ಧತೆ ಖಂಡಿತ ಅಲ್ಲ ಎಂದ ಅವರು, ಕನ್ನಡಪರ ಸಂಘಟನೆಗಳು ನಾಳೆ ಕರೆ ನೀಡಿರುವ ಬಂದ್ ಹಿಂಪಡೆಯಬೇಕು ಎಂದು ಮನವಿ ಮಾಡಿದರು.

ಸಿಎಂ ಪರಮಾಧಿಕಾರ: ಖಾತೆ ಬದಲಾವಣೆ ಮುಖ್ಯಮಂತ್ರಿ ಪರಮಾಧಿಕಾರ. ಅವರು ಯಾವುದೇ ಖಾತೆ ನೀಡಿದರೂ ಪ್ರಶ್ನಿಸುವಂತಿಲ್ಲ. ನನ್ನ ಬಳಿ ಇದ್ದ ಸಕ್ಕರೆ ಖಾತೆಯನ್ನು ಹಿಂಪಡೆದಿದ್ದಾರೆ. ನನಗೆ ಬೇಸರವಿಲ್ಲ, ನೀಡಿರುವ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News