ಸಾರಿಗೆ ಸಂಸ್ಥೆಗೆ 1,200 ಹೊಸ ಬಸ್ ಗಳ ಸೇರ್ಪಡೆ: ಡಿಸಿಎಂ ಲಕ್ಷ್ಮಣ ಸವದಿ

Update: 2020-02-12 12:18 GMT

ಬೆಂಗಳೂರು, ಫೆ. 12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಗೆ ಮಾರ್ಚ್ 31ರೊಳಗೆ 1,200 ಹೊಸ ಬಸ್‌ಗಳ ಸೇರ್ಪಡೆ ಮಾಡಲಾಗುವುದು ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಂದಿಲ್ಲಿ ಮಾಹಿತಿ ನೀಡಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 3 ಸಾವಿರ ಹೊಸ ಬಸ್ ಸೇರ್ಪಡೆಗೆ ಉದ್ದೇಶಿಸಿತ್ತು. ಆದರೆ. ಆರ್ಥಿಕ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಸ್ ಪೂರೈಕೆ ಸಾಧ್ಯವಿಲ್ಲವೆಂದು ಕಂಪೆನಿಗಳು ತಿಳಿಸಿದ್ದರಿಂದ ಈ ಬಾರಿ 1,200 ಬಸ್ ಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದರು.

ಎಲೆಕ್ಟ್ರಿಕ್ ಬಸ್ ಖರೀದಿಸುವ ಪ್ರಸ್ತಾವನೆ ಇದೆ. ಹಂಗೇರಿಯ ಕಂಪೆನಿಯೊಂದು ಎಲೆಕ್ಟ್ರಿಕ್ ಬಸ್ ಪೂರೈಕೆಗೆ ಮುಂದೆ ಬಂದಿದೆ. ಆದರೆ, ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದ ಅವರು, ಪ್ರತಿ ಎಲೆಕ್ಟ್ರಿಕ್ ಬಸ್‌ಗೆ 2 ಕೋಟಿ ರೂ. ವೆಚ್ಚವಾಗಲಿದೆ ಎಂದರು.

ಆದಾಯದ ನಿರೀಕ್ಷೆ: ಮೋಟಾರ್ ವಾಹನಗಳ ನೋಂದಣಿಯಿಂದ ಈ ವರ್ಷ 7ಸಾವಿರ ಕೋಟಿ ರೂ.ಆದಾಯ ನಿರೀಕ್ಷಿಸಲಾಗಿತ್ತು. ಆದರೆ, ಆರ್ಥಿಕ ಹಿಂಜರಿತದ ಕಾರಣ ನಿರೀಕ್ಷಿತ ಆದಾಯದಲ್ಲಿ ಕೊಂಚ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಪ್ರತಿಕ್ರಿಯೆ ನೀಡಿದರು.

‘ಅರಣ್ಯ ಸಚಿವ ಆನಂದ್ ಸಿಂಗ್ ಮೇಲೆ ಕೇವಲ ಆರೋಪಗಳಿವೆಯೇ ಹೊರತು ಅವು ಯಾವೂ ಇನ್ನೂ ಸಾಬೀತಾಗಿಲ್ಲ. ಹೀಗಾಗಿ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಅರಣ್ಯ ಇಲಾಖೆ ಖಾತೆ ವಹಿಸಿರುವುದರಲ್ಲಿ ಯಾವುದೇ ತಪ್ಪು ಇಲ್ಲ’

-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News