ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತ್ಯು
ತುಮಕೂರು,ಫೆ.12: ಶಾಲೆಗೆಂದು ತೆರಳಿದ್ದ ಮೂವರು ವಿದ್ಯಾರ್ಥಿಗಳು ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟ ಘಟನೆ ಜಿಲ್ಲೆಯ ಗುಬ್ಬಿ ಕೆರೆಯಲ್ಲಿ ಇಂದು ಮದ್ಯಾಹ್ನ ನಂತರ ನಡೆದಿದೆ.
ಮೂಲತಃ ಬೆಂಗಳೂರಿನ ಮಾರುತಿ ನಗರದ ಶ್ರೀನಿವಾಸ (9 ನೇ ತರಗತಿ), ಗುಬ್ಬಿ ತಾಲೂಕಿನ ಕಲ್ಲೆನಹಳ್ಳಿಯ ನಂದನ್( 8 ನೇ ತರಗತಿ) ಚೇಳೂರು ಹೋಬಳಿ ಎನ್.ರಾಂಪುರದ ದರ್ಶನ್ ಮೃತ ವಿದ್ಯಾರ್ಥಿಗಳು.
ಇವರು ತಾಲೂಕಿನ ಎಸ್ಸಿ-ಎಸ್ಟಿ ಹಾಸ್ಟೆಲ್ ನಲ್ಲಿ ವಿಧ್ಯಾಬಾಸ ಮಾಡುತ್ತಿದ್ದು, ಶಾಲೆಗೆ ಹೋಗುವುದಾಗಿ ತೆರಳಿದ ಐದು ವಿದ್ಯಾರ್ಥಿಗಳು ಶಾಲೆಗೆ ತೆರಳದೆ ನೇರವಾಗಿ ಗುಬ್ಬಿ ಕೆರೆಯ ಕೋಡಿಯಲ್ಲಿ ಈಜಲು ಹೋಗಿದ್ದಾರೆ. ಮೊದಲು ಮೂವರು ನೀರಿಗಿಳಿದಿದ್ದು, ಆದರೆ ಕೆರೆಯಲ್ಲಿ ಹೂಳು ತೆಗೆದಿದ್ದರಿಂದ ಉಂಟಾದ ಆಳವಾದ ಗುಂಡಿಯಲ್ಲಿ ವಿದ್ಯಾರ್ಥಿಗಳು ಬಾಕಿಯಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ತಾಲೂಕು ದಂಡಾಧಿಕಾರಿಗಳು ಭೇಟಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ವರ್ಗದವರು ಮತ್ತು ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ವಿದ್ಯಾರ್ಥಿಗಳನ್ನು ನೀರಿನಿಂದ ಹೊರ ತೆಗೆಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾದರು.