ಮೈಸೂರು: ಹುಚ್ಚು ನಾಯಿ ಕಡಿದು ಐವರು ಮಕ್ಕಳಿಗೆ ಗಾಯ, ಬಾಲಕಿಯ ಸ್ಥಿತಿ ಗಂಭೀರ

Update: 2020-02-12 15:10 GMT

ಮೈಸೂರು,ಫೆ.12: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೇವಿರಮ್ಮನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾನಗರ ಬಡಾವಣೆಯಲ್ಲಿ ಹುಚ್ಚು ನಾಯಿ ಕಡಿದ ಪರಿಣಾಮ ಐವರು ಮಕ್ಕಳು ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ವಿಧಿಶಾ(6) ನಿವೇದಿತಾ(8) ಶ್ರಾವಣಿ(5) ಆರೋಹಿ(5) ಹಾಗೂ ಯೋಗಿತಾ ಎಂದು ಹೇಳಲಾಗಿದೆ. ಈ ಮಕ್ಕಳು ಬಡಾವಣೆಯಲ್ಲಿ ಆಟವಾಡುತ್ತಿದ್ದಾಗ ಹುಚ್ಚು ನಾಯಿ ದಾಳಿ ನಡೆಸಿದೆ. ರೊಚ್ಚಿಗೆದ್ದ ಸ್ಥಳೀಯರು ನಾಯಿಯನ್ನು ಕೊಂದು ಹಾಕಿದ್ದಾರೆ.

ನಾಯಿ ಗಂಭೀರ ದಾಳಿ ನಡೆಸಿದ ಪರಿಣಾಮ ಪ್ರದೀಪ್ ಕುಮಾರ ಅವರ ಪುತ್ರಿ ವಿಧಿಶಾ ಅವರ ಕೆನ್ನೆ, ತುಟಿಯ ಭಾಗದ ಮಾಂಸ ಕಿತ್ತು ಬಂದಿವೆ. ಗಂಭೀರವಾಗಿ ಗಾಯಗೊಂಡಿರುವ ವಿಧಿಶಾರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನುಳಿದ ಮಕ್ಕಳ ಬೆನ್ನು, ಭುಜ, ಕೈಕಾಲುಗಳಿಗೆ ನಾಯಿ ಕಚ್ಚಿದ್ದು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಧಿಶಾಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕಿದ್ದು, ಪೋಷಕರು ಬಡವರಾಗಿದ್ದಾರೆ. ರಸ್ತೆ ಬದಿಯಲ್ಲಿ ಪಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದು, ಮಗುವಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂದು ಸಂಬಂಧಿಕರು ಆಗ್ರಹಿಸಿದ್ದಾರೆ.

'ಪ್ರಥಮ ಚಿಕಿತ್ಸೆ ನೀಡಬೇಕಾದ ನರ್ಸ್ ಗಳು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಇಲ್ಲದ ಕಾರಣ ಮಕ್ಕಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಾಯಿತು ಎಂದು ಗಾಯಾಳು ಯೋಗಿತಾ ತಂದೆ ಆರೋಪಿಸಿದ್ದಾರೆ.

ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್ ಮಾತನಾಡಿ, ಮಕ್ಕಳನ್ನು ಕಡಿದ ನಾಯಿಗೆ ಹುಚ್ಚು ಹಿಡಿದಿತ್ತು. ಗಾಯಾಳುಗಳಿಗೆ ನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡಲಾಗಿದೆ. ವಿಧಿಶಾಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News