ಸಿಎಎ ವಿರೋಧಿ ನಾಟಕ: ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಏಕಸದಸ್ಯ ಪೀಠಕ್ಕೆ ವರ್ಗಾಯಿಸಿದ ಹೈಕೋರ್ಟ್

Update: 2020-02-12 15:52 GMT

ಬೆಂಗಳೂರು, ಫೆ.12: ಸಿಎಎ ವಿರೋಧಿಸುವ ಅಂಶಗಳನ್ನಿಟ್ಟುಕೊಂಡು ಮಕ್ಕಳು ನಾಟಕ ಪ್ರದರ್ಶಿಸಿದ ವಿಚಾರದಲ್ಲಿ ಬೀದರ್‌ನ ಶಾಹೀನ್ ಶಿಕ್ಷಣ ಸಂಸ್ಥೆಯ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕು ಹಾಗೂ ವಿಚಾರಣೆ ಕೈಬಿಡಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠಕ್ಕೆ ವರ್ಗಾಯಿಸಿ ಆದೇಶಿಸಿದೆ.

ಈ ಕುರಿತು ನಯನಾ ಜ್ಯೋತಿ ಜವಾರ್ ಸೇರಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಶಾಹೀನ್ ಶಿಕ್ಷಣ ಸಂಸ್ಥೆಯ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕು ಹಾಗೂ ವಿಚಾರಣೆ ಕೈಬಿಡಬೇಕೆಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಆದರೆ, ಪಿಐಎಲ್ ಅಡಿಯಲ್ಲಿ ವಿಚಾರಣೆಗೆ ಕೈಗೆತ್ತಿಗೊಳ್ಳಲು ಬರುವುದಿಲ್ಲ. ಈ ಅರ್ಜಿ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠಕ್ಕೆ ವರ್ಗಾಯಿಸಿತು.

ಶಾಹೀನ್ ಶಾಲೆಯ ವಿದ್ಯಾರ್ಥಿಗಳು ಸಿಎಎಗೆ ಸಂಬಂಧಪಟ್ಟ ನಾಟಕ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಆದರೆ, ಅದಕ್ಕೆ ಪರಿಹಾರ ಏನೆಂದು ಕೇಳಿಲ್ಲ. ಅಲ್ಲದೆ, ಈ ಬಗ್ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಲು ಈ ಆದೇಶ ಅಡ್ಡಿ ಆಗುವುದಿಲ್ಲ ಎಂದು ನ್ಯಾಯಪೀಠವು ತಿಳಿಸಿತು. ಅರ್ಜಿದಾರರ ಪರ ವಕೀಲರು ಕೋರ್ಟ್‌ಗೆ ಹಾಜರಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News