ಫೆ.14ರಂದು ‘ಇನ್ವೆಸ್ಟ್ ಕರ್ನಾಟಕ’ ಹುಬ್ಬಳ್ಳಿ ಸಮಾವೇಶಕ್ಕೆ ಚಾಲನೆ: ಜಗದೀಶ್ ಶೆಟ್ಟರ್

Update: 2020-02-12 16:48 GMT

ಹುಬ್ಬಳ್ಳಿ, ಫೆ.12: ಬೆಂಗಳೂರು ಹೊರತು ಪಡಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಫೆ.14ರಂದು ‘ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ-2020’ ಆಯೋಜಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಬುಧವಾರ ನಗರದ ಸರ್ಕಿಟ್ ಹೌಸ್‌ನಲ್ಲಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದ ಪೂರ್ವಭಾವಿ ಸಿದ್ಧತೆಗಳ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಹುಬ್ಬಳ್ಳಿ ನಗರದ ಡೆನಿಸ್ಸನ್ ಹೊಟೇಲ್‌ನಲ್ಲಿ ಆಯೋಜಿಸಿರುವ ಈ ಸಮಾವೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದಗೌಡ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಕೈಗಾರಿಕಾ ಬೆಳವಣಿಗೆ ಕೇವಲ ಬೆಂಗಳೂರಿನಲ್ಲಿ ಆಗುತ್ತಿದ್ದು, ದ್ವಿತೀಯ ಹಾಗೂ ತೃತೀಯ ಶ್ರೇಣಿಯ ನಗರಗಳಲ್ಲಿಯೂ ಕೈಗಾರಿಕೋದ್ಯಮದ ಬೆಳವಣಿಗೆ ಆಗಬೇಕೆಂಬ ಉದ್ದೇಶದಿಂದ ಈ ಭಾಗದಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ಆಯೋಜಿಸಿದ್ದೇವೆ. ಈ ಸಮಾವೇಶದಿಂದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹಾವೇರಿ, ವಿಜಯಪುರ, ಕಲುಬುರಗಿ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೋದ್ಯಮ ಚಿಗುರೊಡೆಯಲಿದೆ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಮಾವೇಶಕ್ಕೆ 1000ಕ್ಕೂ ಹೆಚ್ಚು ಉದ್ಯಮಿಗಳ ಆಗಮನ ನಿರೀಕ್ಷಿಸಿದ್ದೇವೆ. ಹೈದರಾಬಾದ್, ಮುಂಬೈ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆಗೆ ಇರುವ ವಿಫುಲ ಅವಕಾಶಗಳ ಬಗ್ಗೆ ಉದ್ಯಮಿಗಳಿಗೆ ತಿಳಿಸಿದಾಗ ಅವರು ಹೆಚ್ಚು ಆಸಕ್ತಿ ತೋರಿಸಿದ್ದಾರೆ ಎಂದು ಅವರು ಹೇಳಿದರು.

ಹಿಂದೂಜಾ ಹಾಗೂ ಟಾಟಾ ಗ್ರೂಪ್‌ನ ಮುಖ್ಯಸ್ಥರು ಈ ಸಮಾವೇಶಕ್ಕೆ ತಮ್ಮ ತಂಡ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ತಂಡಗಳು ಆಗಮಿಸಿ ಯಾವ ವಲಯದಲ್ಲಿ ಹೂಡಿಕೆ ಮಾಡಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸಲಿವೆ. ಜೊತೆಗೆ, ಚೀನಾ ಮೂಲದ ಕಂಪನಿಯ ಬೆಂಗಳೂರು ಪ್ರತಿನಿಧಿಗಳು ಆಗಮಿಸಿ, ವಿದ್ಯುತ್ಚಾಲಿತ ವಾಹನ ನಿರ್ಮಾಣದ ಕುರಿತು ಸಾಧಕ ಬಾಧಕದ ಬಗ್ಗೆಯೂ ವಿವರ ಕಲೆಹಾಕಲಿದ್ದಾರೆ ಎಂದು ಅವರು ಹೇಳಿದರು. ಹುಬ್ಬಳ್ಳಿ- ಧಾರವಾಡ ನಗರ ಹೂಡಿಕೆಗೆ ಸೂಕ್ತ ವಾತಾವರಣವನ್ನು ಹೊಂದಿದೆ. ಹುಬ್ಬಳ್ಳಿಯಲ್ಲಿ ಎಫ್‌ಎಂಸಿಜಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ, ಇತ್ತೀಚೆಗೆ ಗುವಾಹಟಿಗೆ ಭೇಟಿ ನೀಡಿ, ಗುವಾಹಟಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್(ಜಿಎಂಎ) ಮತ್ತು ಗ್ರಾಹಕ ಸರಕುಗಳ ಉತ್ಪಾದನಾ ಉದ್ಯಮಗಳಾದ (ಜ್ಯೋತಿ ಲ್ಯಾಬ್ಸ್, ಗೋದ್ರೇಜ್ ಮತ್ತು ಕ್ರಿಯೇಟಿವ್ ಪಾಲಿಪ್ಯಾಕ್) ಕರ್ನಾಟಕದಲ್ಲಿ ಹೂಡಿಕೆ ಮಾಡಲು ಸೆಳೆದಿದ್ದೇವೆ ಎಂದು ಅವರು ಹೇಳಿದರು.

ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ 2500 ಎಕರೆ ಲ್ಯಾಂಡ್ ಬ್ಯಾಂಕ್ ಲಭ್ಯತೆ ಇದೆ. ಆ ಭಾಗದಲ್ಲಿ ಕೈಗಾರಿಕೆ ತೆರೆಯುವ ಆಸಕ್ತಿಯೂ ಕೆಲ ಕಂಪನಿಗಳಿಂದ ವ್ಯಕ್ತವಾಗಿವೆ. ಕೆಐಎಡಿಬಿಯು ಭೂ ಲಭ್ಯತೆ ಹೊಂದಿದ್ದು, ಕೆಲವೆಡೆ ಭೂ ಸ್ವಾಧೀನವನ್ನೂ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಆಸಕ್ತರನ್ನು ಸ್ಥಳ ಪರಿಶೀಲನೆಗೂ ಕರೆದೊಯ್ಯಲಾಗುತ್ತಿದೆ. ಮತ್ತೊಂದೆಡೆ ಮೂಲಸೌಕರ್ಯವಾದ ನೀರು ಹಾಗೂ ರಸ್ತೆ ಅಗಲೀಕರಣದಂತಹ ಕೆಲಸವೂ ಸಾಗಿವೆ ಎಂದು ಅವರು ವಿವರಣೆ ನೀಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಟೆಕ್ಸ್‌ಟೈಲ್ಸ್, ವಾಲ್ಸ್, ಸೋಲಾರ್ ಪವರ್, ಫುಡ್ ಪಾರ್ಕ್ ಸೇರಿದಂತೆ ಬಹುತೇಕ ವಲಯಗಳಲ್ಲಿ ಆಸಕ್ತಿ ವ್ಯಕ್ತವಾಗಿವೆ. ಇತ್ತೀಚೆಗೆ ಪತಂಜಲಿ ಸಂಸ್ಥಾಪಕ ಬಾಬಾ ರಾಮ್ ದೇವ್ ಅವರೊಂದಿಗೂ ಫುಡ್ ಪಾರ್ಕ್ ತೆರೆಯುವ ಸಂಬಂಧ ಚರ್ಚಿಸಿದ್ದೇವೆ. ಅವರ ತಂಡ ಹುಬ್ಬಳ್ಳಿಗೆ ಆಗಮಿಸಿ ಇಲ್ಲಿನ ಆಹಾರ ಪದಾರ್ಥಗಳ ಲಭ್ಯತೆ ಆಧಾರದ ಮೇಲೆ ಅಧ್ಯಯನ ನಡೆಸುವುದಾಗಿ ಹೇಳಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಲ್ಲಾಧಿಕಾರಿ ದೀಪಾ ಚೋಳನ್, ಶಾಸಕ ಅರವಿಂದ ಬೆಲ್ಲದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News