ಕಳಸ: ಮುಂದುವರಿದ ನಿವೇಶನ ರಹಿತರ ಧರಣಿ

Update: 2020-02-12 17:44 GMT

ಕಳಸ, ಫೆ.12: ಇಲ್ಲಿನ ಗ್ರಾಪಂ ವ್ಯಾಪ್ತಿಯ ಕುಂಬಳಡಿಕೆ ಮತ್ತು ಹಿನಾರಿ ಗುಡ್ಡದಲ್ಲಿ ಪ್ರತ್ಯೇಕವಾಗಿ 200ಕ್ಕೂ ಹೆಚ್ಚು ಗುಡಿಸಲುಗಳನ್ನು ನಿರ್ಮಿಸಿಕೊಂಡು ನಿವೇಶನ ಕಲ್ಪಿಸಲು ಒತ್ತಾಯಿಸಿ ರವಿವಾರದಿಂದ ನಡೆಸುತ್ತಿರುವ ಧರಣಿ ಸೋಮವಾರವೂ ಮುಂದುವರಿದಿದೆ.

ಸ್ಥಳಕ್ಕೆ ಮೂಡಿಗೆರೆ ತಹಶೀಲ್ದಾರ್ ಹಾಗೂ ಶಾಸಕರು ಭೇಟಿ ನೀಡಿ ಬೇರೆಡೆ ನಿವೇಶನ ನೀಡುವುದಾಗಿ ಭರವಸೆ ನೀಡಿದರೂ ಅದಕ್ಕೆ ಒಪ್ಪದ ನಿವೇಶನ ರಹಿತರು ಗುಡಿಸಲುಗಳನ್ನು ನಿರ್ಮಿಸಿದ ಸ್ಥಳದಲ್ಲೇ ನಿವೇಶನ ನೀಡಬೇಕೆಂದು ಪಟ್ಟು ಹಿಡಿದರು.

ಈ ಮಧ್ಯೆ ಕಂದಾಯಾಧಿಕಾರಿ ಯಡವಟ್ಟಿನಿಂದಾಗಿ ಸ್ಥಳೀಯ ಕೃಷಿಕ ಬಾಲಕೃಷ್ಣ ಕೃಷಿ ಮಾಡಿ ಜಮೀನು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದ ಇದೇ ಭೂಮಿಯನ್ನು ಇತ್ತೀಚೆಗೆ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಲು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದರು. ಜಮೀನಿನಲ್ಲಿದ್ದ ಬೆಲೆ ಬಾಳುವ ವಿವಿಧ ಜಾತಿಯ ಕಾಡು ಮರಗಳನ್ನು ಕಡಿದು ಹಾಕಿದ್ದಾರೆ. ಈಗ ಇದೇ ಜಾಗದಲ್ಲಿ ನಿವೇಶನ ರಹಿತರು ಗುಡಿಸಲುಗಳನ್ನು ನಿರ್ಮಿಸಿಕೊಂಡು ನಮಗೆ ಇದೇ ಸ್ಥಳದಲ್ಲಿ ನಿವೇಶನ ನೀಡಬೇಕು ಎನ್ನುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ಹಿನಾರಿಯಲ್ಲಿಯೇ ನಿವೇಶನ ನೀಡಬೇಕು ಎಂದು ಧರಣಿ ನಿರತರು ಪಟ್ಟು ಹಿಡಿದಿದ್ದಾರೆ. ಗುಡಿಸಲು ತೆರವುಗೊಳಿಸಲು ತೆರಳಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ನಿವೇಶನ ರಹಿತರ ಮಧ್ಯೆ ಮಾತಿನ ಚಕಮಕಿ ನಡೆದು ನಿವೇಶನ ರಹಿತರು ಅರಣ್ಯ ಇಲಾಖೆ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು, ಈ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಈ ಮಧ್ಯೆ ಮಂಗಳವಾರ ರಾತ್ರಿ ಕುಂಬಳಡಿಕೆಯಲ್ಲಿ ನಿವೇಶನ ರಹಿತರು ಗುಡಿಸಲು ನಿರ್ಮಿಸಿದ್ದ ಸ್ಥಳಕ್ಕೆ ಐದು ಜನ ಮುಸುಕುಧಾರಿಗಳು ಅಕ್ರಮವಾಗಿ ಪ್ರವೇಶ ಮಾಡಿ ದೊಣ್ಣೆಗಳನ್ನು ಹಿಡಿದು ಟೆಂಟ್ ಹರಿದು ಹಾಕಿದ್ದಾರೆಂದು ತಿಳಿದು ಬಂದಿದ್ದು, ಕೂಡಲೇ ಸ್ಥಳದಲ್ಲಿದ್ದವರು ಕೂಗಿದಾಗ ಮುಸುಕುಧಾರಿಗಳು ಓಡಿ ಹೋಗಿದ್ದಾರೆ. ನಂತರ ಅಲ್ಲಿದ್ದ ನಿವೇಶನ ರಹಿತರು ಮುಖಂಡ ಸಂಜೀವ ಎಂಬವರ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಳಸ ಗ್ರಾಪಂಗೆ ಅನೇಕ ವರ್ಷಗಳ ಹಿಂದೆ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಆದರೆ ಕಂದಾಯ ಜಾಗ ಇಲ್ಲ ಎಂದು ಸಬೂಬು ಹೇಳುತ್ತ ನಮಗೆ ನಿವೇಶನ ನೀಡಿಲ್ಲ. ಸ್ಥಳೀಯ ನಿವೇಶನ ರಹಿತರಿಗೆ ಜಿಲ್ಲಾಡಳಿತ ಭೂಮಿ ಕಾಯ್ದಿರಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಸೂಕ್ತ ಭರವಸೆ ನೀಡುವವರೆಗೂ ಇಲ್ಲಿಂದ ನಾವು ಕದಲುವುದಿಲ್ಲ.

-ಸಂಜೀವ, ಕುಂಬಳಡಿಕೆ ನಿವೇಶನ ರಹಿತರ ಮುಖಂಡ

ಶಾಸಕರು ನಿವೇಶನ ರಹಿತರ ಸಮಸ್ಯೆ ಗಳನ್ನು ಪರಿಹರಿಸಬೇಕು. ಈಗಾಗಲೇ ನನ್ನ ಮೇಲೆ ಪ್ರಕರಣ ದಾಖಲಾಗಿದೆ. ಯಾವುದಕ್ಕೂ ನಾವು ಹೆದರುವುದಿಲ್ಲ. ನಮ್ಮ ಬದುಕಿಗಾಗಿ ನಿವೇಶನದ ಹಕ್ಕನ್ನು ಕೇಳುತ್ತಿದ್ದೇವೆ.
-ಲಿಂಗಪ್ಪ, ಹಿನಾರಿ ನಿವೇಶನ ರಹಿತರ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News