'ಅಪಘಾತದ ಸಂದರ್ಭದಲ್ಲಿ ತಮ್ಮ ಪುತ್ರ ಎಲ್ಲಿದ್ದರು' ಎಂಬ ಪ್ರಶ್ನೆಗೆ ಸಚಿವ ಅಶೋಕ್ ಉತ್ತರಿಸಿದ್ದು ಹೀಗೆ...

Update: 2020-02-13 12:45 GMT

ಬೆಂಗಳೂರು, ಫೆ. 13: ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ‘ಅಪಘಾತದ ವೇಳೆ ತಮ್ಮ ಪುತ್ರ ಎಲ್ಲಿದ್ದರು’ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಲು ಕಂದಾಯ ಸಚಿವ ಆರ್.ಅಶೋಕ್ ನಿರಾಕರಿಸಿದ್ದು, ಈ ಬಗ್ಗೆ ತಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ಸಂಭವಿಸಿದ ರಸ್ತೆ ಅಪಘಾತಕ್ಕೂ, ನಮಗೂ ಯಾವುದೇ ಸಂಬಂಧವಿಲ್ಲ. ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ನನ್ನ ಹೆಸರನ್ನು ಪ್ರಸ್ತಾಪ ಮಾಡಲಾಗಿದೆ. ಆದರೆ, ಇದರಲ್ಲಿ ಯಾವುದೇ ಹುರುಳಿಲ್ಲ. ಈಗಾಗಲೇ ಅಪಘಾತ ಸಂಬಂಧ ಎಫ್‌ಐಆರ್ ದಾಖಲಾಗಿದೆ ಎಂದು ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ರಸ್ತೆ ಅಪಘಾತದಲ್ಲಿ ಯುವಕ ಹಾಗೂ ಕಾರಿನ ಚಾಲಕ ಮೃತಪಟ್ಟಿದ್ದು, ಈ ಬಗ್ಗೆ ನನಗೆ ವಿಷಾದವಿದೆ. ಕಾರಿನಲ್ಲಿದ್ದ ಉಳಿದವರಿಗೂ ಗಾಯಗಳಾಗಿವೆ ಎಂಬ ಮಾಹಿತಿ ಇದೆ ಎಂದ ಅವರು, ಪ್ರಕರಣ ತನಿಖೆ ಹಂತದಲ್ಲಿರುವ ಸಂದರ್ಭದಲ್ಲಿ ಈ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ತಪ್ಪಿತಸ್ಥರಿಗೆ ಕಾನೂನು ಪಾಠ ಕಲಿಸಲಿದೆ. ಈ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ತನಿಖೆ ನಡೆದು ಸತ್ಯ ಹೊರಬರಲಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾರು ನೋಂದಣಿ ಆಗಿರುವ ಸಂಸ್ಥೆಗೂ ನಮಗೂ ಸಂಬಂಧವಿಲ್ಲ ಎಂದರು.

ಸಚಿವ ಸ್ಥಾನವೇ ಬೇರೆ. ಕಾನೂನು ಬೇರೆ. ಕಾನೂನು ತನ್ನ ಕೆಲಸವನ್ನು ಮಾಡಲಿದೆ. ಅಪಘಾತದ ವೇಳೆ ತಮ್ಮ ಪುತ್ರ ಎಲ್ಲಿದ್ದ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಚಿವ ಅಶೋಕ್, ಈ ಬಗ್ಗೆ ತಾನು ಪ್ರತಿಕ್ರಿಯೆ ನೀಡುವುದಿಲ್ಲ. ತನಿಖೆಯಿಂದ ಎಲ್ಲವೂ ಬೆಳಕಿಗೆ ಬರಲಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಅವರು ತಿಳಿಸಿದರು.

‘ಬಳ್ಳಾರಿ ಕಾರು ಅಪಘಾತದಲ್ಲಿ ಇಬ್ಬರು ಅಮಾಯಕರು ಮರಣ ಹೊಂದಿದ್ದಾರೆ. ಅಪಘಾತ ಮಾಡಿದ ಪ್ರಭಾವಿ ವ್ಯಕ್ತಿಯನ್ನು ರಕ್ಷಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರದಿಂದ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಸಲ್ಲದು. ಸತ್ಯ ಮತ್ತು ನ್ಯಾಯ ಗೆಲ್ಲಲಿ’

-ಕಾಂಗ್ರೆಸ್ (ಟ್ವೀಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News