×
Ad

ಶಾಹೀನ್ ಶಾಲೆಯ ವಿರುದ್ಧದ ದೇಶದ್ರೋಹ ಪ್ರಕರಣದ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ: ಶಾಸಕಿ ಕನೀಝ್ ಫಾತಿಮಾ

Update: 2020-02-13 20:16 IST

ಬೆಂಗಳೂರು, ಫೆ.13: ಬೀದರ್ ಜಿಲ್ಲೆಯ ಶಾಹೀನ್ ಶಿಕ್ಷಣ ಸಂಸ್ಥೆಯ ವಿರುದ್ಧ ಹೇರಲಾಗಿರುವ ದೇಶದ್ರೋಹ ಪ್ರಕರಣವನ್ನು ಈ ಕೂಡಲೆ ಹಿಂಪಡೆದು, ಬಂಧಿತರಾಗಿರುವ ಅಮಾಯಕರನ್ನು ಬಿಡುಗಡೆ ಮಾಡಬೇಕು. ಒಂದು ವೇಳೆ ಸರಕಾರ ಇದಕ್ಕೆ ಸ್ಪಂದಿಸದಿದ್ದರೆ ಈ ಬಗ್ಗೆ ಫೆ.17ರಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು ಎಂದು ಕಾಂಗ್ರೆಸ್ ಶಾಸಕಿ ಕನೀಝ್ ಫಾತಿಮಾ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾ.5 ರಂದು ಮಂಡಿಸಲಿರುವ 2020-21ನೇ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕನಿಷ್ಠ ಐದು ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಇತ್ತೀಚೆಗೆ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಈ ಮನವಿ ಸಲ್ಲಿಸಲಾಗಿದೆ ಎಂದರು.

ಗುಲ್ಬರ್ಗಾದಲ್ಲಿ ಹಜ್ ಭವನ ನಿರ್ಮಿಸಬೇಕೆಂಬುದು ಮಾಜಿ ಸಚಿವ ಖಮರುಲ್ ಇಸ್ಲಾಮ್ ಅವರ ಕನಸಾಗಿತ್ತು. ಅದಕ್ಕಾಗಿ ಐದು ಎಕರೆ ಜಮೀನನ್ನು ಗುರುತಿಸಿ ಮೀಸಲಿರಿಸಲಾಗಿತ್ತು. ಇದೀಗ, ಗುಲ್ಬರ್ಗಾದಲ್ಲಿ ವಿಮಾನ ನಿಲ್ದಾಣ ಆರಂಭವಾಗಿದ್ದು, ಹಜ್‌ ಯಾತ್ರಿಗಳ ಅನುಕೂಲಕ್ಕಾಗಿ ಹಜ್ ಭವನ ನಿರ್ಮಿಸಲು 10 ಕೋಟಿ ರೂ.ಒದಗಿಸುವಂತೆ ಕೋರಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ಗುಲ್ಬರ್ಗಾ ಜಿಲ್ಲೆಯಲ್ಲಿ ಎಂಸಿಎ(ಅಲ್ಪಸಂಖ್ಯಾತರ ಬಾಹುಳ್ಯವಿರುವ ಪ್ರದೇಶಗಳ ಪಟ್ಟಿ)ಯಿಂದ ಹಿಂಪಡೆದಿದೆ. ಇದರಿಂದಾಗಿ, ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಆದುದರಿಂದ, ಗುಲ್ಬರ್ಗಾ ಜಿಲ್ಲೆಯನ್ನು ಪುನಃ ಎಂಸಿಎ ಅಡಿಯಲ್ಲಿ ತರಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಗುಲ್ಬರ್ಗಾ ಜಿಲ್ಲೆಯಲ್ಲಿ ಬಿದಾಯಿ ಯೋಜನೆಯಡಿ 2013-14 ರಿಂದ ಈವರೆಗೆ 8838 ಅರ್ಜಿಗಳು ಸ್ವೀಕರಿಸಲಾಗಿದ್ದು, 5842 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. 167 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇನ್ನುಳಿದ ಅರ್ಜಿಗಳನ್ನು ಇತ್ಯರ್ಥಪಡಿಸಲು 13.50 ಕೋಟಿ ರೂ.ಗಳನ್ನು ಒದಗಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ಕನೀಝ್ ಫಾತಿಮಾ ತಿಳಿಸಿದರು.

ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿರುವ ಗುಲ್ಬರ್ಗಾದಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗಾಗಿ ತಲಾ ಎರಡು ಹಾಸ್ಟೆಲ್‌ಗಳನ್ನು ಮಂಜೂರು ಮಾಡುವಂತೆಯೂ ಕೋರಲಾಗಿದೆ. ಅಲ್ಲದೇ, ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಪ್ರದೇಶಾಭಿವೃದ್ಧಿಗೂ ಹೆಚ್ಚಿನ ಒತ್ತು ನೀಡುವಂತೆ ಕೋರಲಾಗಿದೆ ಎಂದು ಅವರು ಹೇಳಿದರು.

ಗುಲ್ಬರ್ಗಾ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ನನ್ನ ಅಧಿಕಾರಾವಧಿಯಲ್ಲಿ 240 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಅಲ್ಲದೇ, ಬೆಣ್ಣೆತೋರ ಕುಡಿಯುವ ನೀರಿನ ಯೋಜನೆಗಾಗಿ ಪೈಪ್‌ಲೈನ್ ಬದಲಾವಣೆಯನ್ನು ಮಾಡಿಸಲಾಗಿದೆ. 24/7 ಕುಡಿಯುವ ನೀರು ಸರಬರಾಜು ಮಾಡಲು ವಿಶ್ವ ಬ್ಯಾಂಕ್‌ನಿಂದ ಹಣಕಾಸಿನ ನೆರವು ಯಾಚಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕನೀಝ್ ಫಾತಿಮಾ ಹೇಳಿದರು.

ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರುದ್ಧ ಗುಲ್ಬರ್ಗ ನಗರದ ಶಾದಾಬ್ ಫಂಕ್ಷನ್ ಹಾಲ್ ಬಳಿ ‘ಶಾಹೀನ್ ಬಾಗ್-ಗುಲ್ಬರ್ಗ’ ಹೆಸರಿನಲ್ಲಿ ಹೋರಾಟ ನಡೆಸಲಾಗುತ್ತಿದೆ. ಪ್ರತಿಭಟನಾ ನಿರತ ಮಹಿಳೆಯರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News