ಬೀದರ್ ನ ಶಾಹೀನ್‌ ಶಾಲೆಗೆ ಬೃಂದಾ ಕಾರಟ್‌ ಭೇಟಿ: ಸರಕಾರದ ಕ್ರಮಕ್ಕೆ ಖಂಡನೆ

Update: 2020-02-13 16:18 GMT

ಬೀದರ್, ಫೆ.13: ಶಾಹೀನ್‌ ಶಿಕ್ಷಣ ಸಂಸ್ಥೆಯ ವಿರುದ್ಧದ ದೇಶದ್ರೋಹ ಪ್ರಕರಣವನ್ನು ಹಿಂಪಡೆಯಬೇಕು ಎಂದು ಸಿಪಿಐ(ಎಂ) ಪಾಲಿಟ್‌ ಬ್ಯೂರೊ ಸದಸ್ಯೆ ಬೃಂದಾ ಕಾರಟ್‌ ಅವರು ಒತ್ತಾಯಿಸಿದ್ದಾರೆ.

ಬೀದರ್‌ನ ಶಾಹೀನ್‌ ಶಿಕ್ಷಣ ಸಂಸ್ಥೆಗೆ ಇಂದು ಭೇಟಿ ನೀಡಿದ ಅವರು, ಸಿಎಎ, ಎನ್ಆರ್‌ಸಿ ವಿರೋಧಿಸಿ ನಾಟಕ ಪ್ರದರ್ಶಿಸಿದ್ದಾರೆ ಎಂಬ ಕಾರಣಕ್ಕೆ ಶಾಲೆಯ ಮುಖ್ಯ ಶಿಕ್ಷಕಿ, ವಿದ್ಯಾರ್ಥಿಯ ತಾಯಿ ಹಾಗೂ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿರುವ ಕ್ರಮವನ್ನು ಖಂಡಿಸಿದರು. ಅಲ್ಲದೇ, ರಾಜ್ಯ ಸರ್ಕಾರ ಕೂಡಲೇ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

'ಸಂಸ್ಥೆಯ ವಿರುದ್ಧ ಅನಗತ್ಯವಾಗಿ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಕಲ್ಲಡ್ಕದ ಪ್ರಭಾಕರ ಭಟ್ಟ ಅವರ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸದ ಬಗ್ಗೆ ನಾಟಕ ಪ್ರದರ್ಶಿಸಿದ್ದಕ್ಕೆ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ವಿರುದ್ಧ ಪ್ರಚೋಧನಕಾರಿ ಹೇಳಿಕೆಗೆ ಸಂಬಂಧಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸದೆ ಸಿಎಎ, ಎನ್ಆರ್‌ಸಿ ವಿರೋಧಿಸಿ ನಾಟಕ ಪ್ರದರ್ಶಿಸಿದ್ದಾರೆ ಎಂಬ ಕಾರಣಕ್ಕೆ ಶಾಲೆಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಇದು ಖಂಡನೀಯ. ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಬಾಲಕಿಯ ತಾಯಿ ಹಾಗೂ ಶಿಕ್ಷಕಿಯನ್ನು ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸರ್ಕಾರ ಸಿಎಎ, ಎನ್ಆರ್‌ಸಿ ವಿರುದ್ಧದ ಪ್ರತಿರೋಧದ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದೆ. ಅಲ್ಲದೇ, ವಿಚಾರಣೆ ನೆಪದಲ್ಲಿ ಮಕ್ಕಳಿಗೆ ಪೊಲೀಸರ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News