ವಿಧಾನ ಮಂಡಲ ಜಂಟಿ ಅಧಿವೇಶನ: ರಾಜ್ಯಪಾಲರಿಗೆ ಅಧಿಕೃತ ಆಹ್ವಾನ
Update: 2020-02-13 21:42 IST
ಬೆಂಗಳೂರು, ಫೆ. 13: ಇದೇ ತಿಂಗಳ 17ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ.
ಗುರುವಾರ ರಾಜಭವನಕ್ಕೆ ಭೇಟಿ ನೀಡಿದ ಕಾಗೇರಿ ಮತ್ತು ಪ್ರತಾಪಚಂದ್ರ ಶೆಟ್ಟಿ, ರಾಜಪಾಲ ವಜುಭಾಯಿ ವಾಲಾ ಅವರನ್ನು ಆಹ್ವಾನಿಸಿದರು. ಫೆ.17ರಿಂದ 21ರ ವರೆಗೆ ವಿಧಾನ ಮಂಡಲ ಜಂಟಿ ಅಧಿವೇಶನ ಹಾಗೂ ಮಾರ್ಚ್ 2ರಿಂದ 31ರ ವರೆಗೆ ಬಜೆಟ್ ಅಧಿವೇಶನ ನಡೆಯಲಿದೆ.
ಈಗಾಗಲೇ ಬಜೆಟ್ ಮಂಡನೆಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ರೈತ ಮತ್ತು ದಲಿತ ಸಂಘಟನೆಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದು, ಮಾರ್ಚ್ 5ಕ್ಕೆ ಬಜೆಟ್ ಮಂಡನೆಗೆ ದಿನಾಂಕ ನಿಗದಿಪಡಿಸಲಾಗಿದೆ.