×
Ad

ಪೌರತ್ವ ಕಾಗದಗಳಿಂದ ಅಲ್ಲ, ರಕ್ತದಿಂದ ಮಾತ್ರ ತೋರಿಸಲು ಸಾಧ್ಯ: ಜ್ಞಾನಪ್ರಕಾಶ ಸ್ವಾಮೀಜಿ

Update: 2020-02-13 22:34 IST

ತರೀಕೆರೆ, ಫೆ.13: ಪೌರತ್ವ ತಿದ್ದುಪಡಿ ಕಾಯ್ದೆಯು ಧರ್ಮ, ಜಾತಿ ಆಧಾರಿತವಾಗಿದ್ದು, ಇದನ್ನು ಜಾರಿ ಮಾಡುವ ಮೂಲಕ ಕೇಂದ್ರ ಸರಕಾರ ಸಂವಿಧಾನ ವಿರೋಧಿ ಕೃತ್ಯ ಎಸಗುತ್ತಿದೆ ಎಂದು ಮೈಸೂರಿನ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸಂಜೆ ತಾಲೂಕಿನ ಮುಸ್ಲಿಂ ಸಮಾಜ, ದಲಿತ, ಹಿಂದುಳಿದ ಸಮುದಾಯಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಜನಜಾಗೃತಿ ಕಾರ್ಯಕ್ರಮ ಹಾಗೂ ಪ್ರತಿರೋಧ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಇದೇ ದೇಶದ ಪ್ರಜೆಗಳೆಂಬುದನ್ನು ಕಾಗದ ಪತ್ರಗಳಿಂದ ತೋರಿಸಲು ಸಾಧ್ಯವಿಲ್ಲ. ಅದನ್ನು ರಕ್ತದಿಂದ ಮಾತ್ರ ತೋರಿಸಲು ಸಾಧ್ಯ. ಮೋದಿ ಹಾಗೂ ಅಮಿತ್ ಶಾ ಅವರಿಗೆ ದೇಶಪ್ರೇಮಿಗಳು ಯಾರು? ಈ ದೇಶದ ನಿಜವಾದ ವಾರಸುದಾರರು ಯಾರು? ಎಂಬ ಬಗ್ಗೆ ದಾಖಲೆ ಬೇಕಿದ್ದರೆ ದೇಶದ ಎಲ್ಲರ ಡಿಎನ್‌ಎ ಪರೀಕ್ಷೆ ಮಾಡಲಿ ಎಂದರು.

ಎನ್‌ಆರ್‌ಸಿ ಕಾಯ್ದೆಯಿಂದಾಗಿ ದೇಶದಲ್ಲಿ ಸುಮಾರು 89 ಕೋಟಿ ಜನರು ನಿರಾಶ್ರಿತರಾಗಲಿದ್ದಾರೆಂಬ ಮಾಹಿತಿ ಇದೆ. ಇಷ್ಟು ಜನರನ್ನು ಬಂಧಿಸಿಡಲು ದೇಶದಲ್ಲಿ ಬಂಧೀಖಾನೆಗಳನ್ನು ನಿರ್ಮಿಸಲು ಮೋದಿ ಮತ್ತು ಅಮಿತ್ ಶಾರಿಂದ ಸಾಧ್ಯವಿದೆಯೇ? ಅವುಗಳನ್ನು ನಿರ್ವಹಿಸಲು ಹಣ ಎಲ್ಲಿಂದ ತರುತ್ತಾರೆ? ಎಂದು ಪ್ರಶ್ನಿಸಿದ ಅವರು, ಈ ದೇಶ ಕುವೆಂಪು, ಬಸವಣ್ಣ, ಅಂಬೇಡ್ಕರ್ ಹುಟ್ಟಿದ ನಾಡಾಗಿದ್ದು, ಅವರು ದೇಶದಲ್ಲಿ ಪ್ರೀತಿ, ಮಾನವೀಯತೆ ಬೀಜ ಗಳನ್ನು ಬಿತ್ತಿದ್ದಾರೆ. ಇಂತಹ ನೆಲದಲ್ಲಿ ಮೋದಿ ಮತ್ತು ಅಮಿತ್ ಶಾ ಆರೆಸ್ಸೆಸ್ ಹಾಗೂ ಹಿಟ್ಲರ್‌ನ ಧ್ವೇಷದ ಬೀಜಗಳನ್ನು ಬಿತ್ತಲು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಮೂಲಕ ಸಂಚು ಮಾಡಿದ್ದಾರೆ. ಪ್ರೀತಿ, ಮಾನವೀಯತೆಯ ನೆಲದಲ್ಲಿ ದ್ವೇಷ ಬೀಜ ಎಂದಿಗೂ ಅರಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಿಸಿದರು.

ವಿಚಾರವಾದಿ ಹಾಗೂ ಬಜರಂಗದಳದ ಮಾಜಿ ಮುಖಂಡ ಮಹೇಂದ್ರ ಕುಮಾರ್ ಮಾತನಾಡಿ, ದೇಶ ಹಾಗೂ ಸಂವಿಧಾನಕ್ಕೆ ಅಪಾಯ ಎದುರಾಗಿದೆ. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯ್ದೆಗಳು ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಕಾಯ್ದೆಗಳಾಗಿವೆ. ಇಂತಹ ಕಾಯ್ದೆಗಳ ಜಾರಿಗೆ ಅನುವು ಮಾಡಿಕೊಟ್ಟಲ್ಲಿ ಸಂವಿಧಾನ ಇದ್ದೂ ಇಲ್ಲದಂತಹ ವ್ಯವಸ್ಥೆಯೊಳಗೆ ನಾವೆಲ್ಲರೂ ಇರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಚಿಂತಕ, ಹೋರಾಟಗಾರ ಕೆ.ಎಲ್.ಅಶೋಕ್ ಮಾತನಾಡಿ, ಸಂವಿಧಾನಕ್ಕೆ ಬಹಳ ಹಿಂದೆಯೇ ಕುತ್ತು ಬಂದೊದಗಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ, ಸಂವಿಧಾನವನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಅವರಿಗೆ ಆರೆಸ್ಸೆಸ್ ಹೇಳಿದ್ದೇ ಸಂವಿಧಾನವಾಗಿದ್ದು, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಅಧಿಕಾರ, ಆಡಳಿತ ನಡೆಸುತ್ತಿರುವುದರಿಂದ ದೇಶದ ಆರ್ಥಿಕ ವ್ಯವಸ್ಥೆ ನೆಲಕಚ್ಚಿದೆ. ಸರಕಾರಿ ಉದ್ದಿಮೆಗಳು ಮುಚ್ಚುತ್ತಿವೆ, ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಇವೆಲ್ಲವನ್ನು ಕೊನೆಗೊಳಿಸಲು ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದರು. ದಸಂಸ ರಾಜ್ಯ ಸಂಚಾಲಕ ಗುರುಮೂರ್ತಿ, ದಿಲ್ಲಿಯ ಅಂಬೇಡ್ಕರ್ ಅಧ್ಯಯನ ಕೇಂದ್ರದ ಮುಖ್ಯಸ್ಥ ವಿಲಾಸ್ ಕಾರಟ್ ಮಾತನಾಡಿದರು.

ಖಂಡನಾ ನಿರ್ಣಯ: ಪೌರತ್ವ ತಿದ್ದುಪಡಿ ಕಾಯ್ದೆಯು ಮಾನವತೆಯ ವಿರೋಧಿಯಾಗಿದ್ದು, ಸಂವಿಧಾನ ಬಾಹಿರವಾಗಿದೆ. ರಾಷ್ಟ್ರಪತಿ ಈ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯವನ್ನು ಮಾದಿಗ ಮಹಾಸಭಾದ ಅಧ್ಯಕ್ಷ ಚಂದ್ರಪ್ಪ ವೇದಿಕೆಯಲ್ಲಿ ಓದಿದರು.

ಅಂಬೇಡ್ಕರ್ ರಚಿಸಿರುವ ಸಂವಿಧಾನದ ತಳಹದಿಯ ಮೇಲೆ ದೇಶದ ಆಡಳಿತ ವ್ಯವಸ್ಥೆ ನಿಂತಿದೆ. ಅದರಂತೆಯೇ ಸರಕಾರಗಳು ಆಡಳಿತ ನಡೆಸಬೇಕು. ಸಂವಿಧಾನ ಜಾತ್ಯತೀತ ಆಶಯವನ್ನು ವ್ಯಕ್ತಪಡಿಸುತ್ತಿದ್ದು, ಸಂವಿಧಾನಕ್ಕೆ ಧಕ್ಕೆ ಎದುರಾದಾಗ ಎಲ್ಲರೂ ಅದರ ವಿರುದ್ಧ ಧ್ವನಿ ಎತ್ತಬೇಕು. ಸಂವಿಧಾನವನ್ನು ನಾವು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಪ್ರಸಕ್ತ ಸಂವಿಧಾನಕ್ಕೆ ಅಪಾಯ ಎದುರಾಗಿದ್ದು, ಇದರ ವಿರುದ್ಧ ಧ್ವನಿ ಎತ್ತುವುದು ನನ್ನ ಕರ್ತವ್ಯವಾಗಿದೆ. ಈ ಕಾರಣಕ್ಕೆ ನಾನು ಮಠ ಬಿಟ್ಟು ಬೀದಿಗಿಳಿದ ಸ್ವಾಮೀಜಿಯಾಗಿದ್ದೇನೆ.
-ಜ್ಞಾನಪ್ರಕಾಶ ಸ್ವಾಮೀಜಿ, ಮೈಸೂರಿನ ಉರಿಲಿಂಗಿಪೆದ್ದಿ ಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News