ಮೈಸೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕನ್ನಡ ಹೋರಾಟಗಾರರ ಧರಣಿ

Update: 2020-02-13 17:29 GMT

ಮೈಸೂರು,ಫೆ.13: ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಮೈಸೂರು ಕನ್ನಡ ಹೋರಾಟಗಾರರ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂದು ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.

ನಗರದ ಹೋರಾಟಗಾರರು, ಸಾಹಿತಿಗಳು, ಪ್ರಗತಿಪರರು ಡಾ.ಸರೋಜಿನಿ ಮಹಿಷಿ ವರದಿಯನ್ನು ಸರ್ಕಾರ ಕಾರ್ಯರೂಪಕ್ಕೆ ತರುವ ಮೂಲಕ ಸಮಸ್ತ ಕನ್ನಡಿಗರಿಗೆ ನ್ಯಾಯವನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಹೋರಾಟಗಾರರು ಹಲವಾರು ವರ್ಷಗಳಿಂದಲೂ ಕೇಂದ್ರ ಸರ್ಕಾರದಿಂದ ಉದ್ಯೋಗ ವಂಚಿತರಾಗುತ್ತಿರುವ ಕನ್ನಡಿಗರಿಗೆ ಉದ್ಯೋಗವನ್ನು ಕಲ್ಪಿಸಬೇಕು. ರಾಜ್ಯ ಸರ್ಕಾರದ ಎಲ್ಲಾ ವಲಯ ಕಚೇರಿಗಳಲ್ಲಿ ಮತ್ತು ಬ್ಯಾಂಕ್ ಹಾಗೂ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಭಾರತೀಯ ರೈಲ್ವೆಯಲ್ಲಿ ಉತ್ತರ ಭಾರತದವರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡುತ್ತಿದ್ದು, ಕೂಡಲೇ ನಮ್ಮ ಸಂಸದರು ಎಚ್ಚೆತ್ತು ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಅನೇಕ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶದ ಒತ್ತಡ ಹೇರಬೇಕು. ಬೇರೆ ರಾಜ್ಯಗಳಲ್ಲಿ ಆ ರಾಜ್ಯಗಳ ಸ್ಥಳೀಯರಿಗೆ ಮೊದಲ ಆದ್ಯತೆಯನ್ನು ನೀಡಿದರೆ ನಮ್ಮ ರಾಜ್ಯದಲ್ಲಿ ವ್ಯತಿರಿಕ್ತವಾಗಿರುವ ಸ್ಥಳೀಯರನ್ನು ಮರೆತಿರುವುದು ನಾಚಿಕೆಗೇಡಿನ ಸಂಗತಿ. ಇದುವರೆಗೂ ಕರ್ನಾಟಕದ ಇತಿಹಾಸದಲ್ಲಿ ಎಷ್ಟು ರಾಜಕೀಯ ಪಕ್ಷಗಳು ರಾಜ್ಯದಲ್ಲೇ ಆಡಳಿತ ನಡೆಸಿವೆ. ಅವೆಲ್ಲವೂ ತಮ್ಮ ಹಾಗೂ ತಮ್ಮ ಪಕ್ಷಗಳಿಗೆ ಲಾಭ ಮಾಡಿಕೊಂಡಿವೆಯೇ ಹೊರತು ಇದರಿಂದ ಕನ್ನಡಿಗರಿಗೆ ಕಿಂಚಿತ್ತೂ ಉಪಕಾರವಾಗಿಲ್ಲ. ಈ ಹಿನ್ನೆಲೆಯಲ್ಲಿ ಇವೆಲ್ಲಕ್ಕೂ ಪರಿಹಾರ, ನ್ಯಾಯ ಸಿಗಬೇಕಾದರೆ ರಾಜ್ಯ ಸರ್ಕಾರ ಕೂಡಲೇ ಡಾ.ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸುವ ಮೂಲಕ ಸಮಸ್ತ ಕನ್ನಡಿಗರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. 

ಮತ್ತೊಂದೆಡೆ ನಗರದ ಗಾಂಧಿ ವೃತ್ತದಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಮೈಸೂರು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘದ ವತಿಯಿಂದ ತೆಂಗಿನ ಕಾಯಿ ಚಿಪ್ಪಿನ ಚಳವಳಿ ನಡೆಯಿತು.

ಮೈಸೂರು ಗಾಂಧಿ ಚೌಕದಲ್ಲಿರುವ ಗಾಂಧಿ ಪ್ರತಿಮೆ ಎದುರು ಗುರುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ  ರಾಜ್ಯದಲ್ಲಿ ಕನ್ನಡಿಗರ ಬದುಕಿನ ಪ್ರಶ್ನೆಯಾದ ಕನ್ನಡಿಗರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಖಾಸಗಿ ಹಾಗೂ ಸರ್ಕಾರಿ ವಲಯಗಳಲ್ಲಿ ಅಂದರೆ ರಾಜ್ಯ ಸರ್ಕಾರದ ಉದ್ದಿಮೆಗಳಲ್ಲಿ ಶೇ.100ರಷ್ಟು ರಾಜ್ಯ ಸರ್ಕಾರದ ಕಚೇರಿಗಳಲ್ಲಿ, ಶೇ.100ರಷ್ಟು ಉದ್ಯೋಗ ನೀಡುವಂತೆ ಹಾಗೂ ನಮ್ಮ ರಾಜ್ಯದಲ್ಲಿ ನೆಲ, ಜಲ, ನೀರು, ವಿದ್ಯುತ್ ಸೌಲಭ್ಯವನ್ನು ಪಡೆದುಕೊಂಡು ಸ್ಥಾಪಿಸುವ ಕಾರ್ಖಾನೆ, ಕೇಂದ್ರ ಸರ್ಕಾರಿ ಉದ್ದಿಮೆ, ಹಣಕಾಸು ಸಂಸ್ಥೆ, ಬ್ಯಾಂಕ್ ಗಳಲ್ಲಿ ಕನ್ನಡಿಗರಿಗೆ ಮೇಲ್ದರ್ಜೆ ಉದ್ಯೋಗದಲ್ಲಿ ಶೇ.65, ಬಿ ದರ್ಜೆ ಹುದ್ದೆಗಳಲ್ಲಿ ಶೇ.80, ಸಿದರ್ಜೆ ಹುದ್ದೆಗಳಲ್ಲಿ ಶೇ.100, ಡಿ.ದರ್ಜೆ ಹುದ್ದೆಗಳಲ್ಲಿ ಶೇ.100ರಷ್ಟು ಉದ್ಯೋಗವನ್ನು ನೀಡಬೇಕೆಂದು ಶಿಫಾರಸು ಮಾಡಿದ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಕನ್ನಡ ಚಳುವಳಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಶಿವಶಂಕರ್,ನಾರಾಯಣ ಗೌಡ, ಗುರುರಾಜ್, ಬಸವಣ್ಣ, ಬಸವರಾಜು, ಜಯಕುಮಾರ್, ಡಾ.ರಘುರಾಮ್ ವಾಜಪೇಯಿ, ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.  

ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ನಾಲಾಬೀದಿ ರವಿ, ಪ್ಯಾಲೆಸ್ ಬಾಬು, ನಾಗರಾಜು, ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News