ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ: ಮಂಡ್ಯದಲ್ಲಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ

Update: 2020-02-13 17:53 GMT

ಮಂಡ್ಯ, ಫೆ.13: ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೆಲವು ಕನ್ನಪಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಬಂದ್‍ಗೆ ಬೆಂಬಲ ನೀಡುವುದಿಲ್ಲವೆಂದು ಈ ಮೊದಲೇ ಕನ್ನಡಪರ ಸಂಘಟನೆಗಳು ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಂದ್ ನಡೆಯಲಿಲ್ಲ. ಬದಲಾಗಿ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ರವಾನಿಸಲಾಯಿತು.

ಬಂದ್ ಕರೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿತ್ತು. ಆದರೆ, ಬಂದ್ ನಡೆಯಲಿಲ್ಲ. ಅಂಗಡಿ ಮುಂಗಟ್ಟುಗಳು, ಸರಕಾರಿ ಕಚೇರಿಗಳು, ಬ್ಯಾಂಕ್, ಶಾಲಾಕಾಲೇಜುಗಳು ಎಂದಿನಂತೆ ತೆರೆದಿದ್ದವು. ಸಾರಿಗೆ ಸಂಚಾರವೂ ಸುಗಮವಾಗಿತ್ತು.

ಮಂಡ್ಯ ನಗರ, ತಾಲೂಕು ಕೇಂದ್ರಗಳಾದ ಮದ್ದೂರು, ಮಳವಳ್ಳಿ, ಪಾಂಡವಪುರ, ಕೆ.ಆರ್.ಪೇಟೆ, ನಾಗಮಂಗಲ, ಶ್ರೀರಂಗಪಟ್ಟಣ ಮತ್ತು ಹೋಬಳಿ ಮತ್ತು ಪ್ರಮುಖ ವಾಣಿಜ್ಯ ಕೇಂದ್ರಗಳ ಗ್ರಾಮಗಳಲ್ಲಿ ಕೆಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ನಗರದಲ್ಲಿ ಪ್ರತಿಭಟನೆ ನಡೆಸಿದ ಕದಂಬ ಸೈನ್ಯ ಸಂಘಟನೆ ಕಾರ್ಯಕರ್ತರು, ಫೆ.17ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಹಿಷಿ ಅವರ ಪರಿಷ್ಕೃತ ವರದಿಯಲ್ಲಿ ಮಂಡಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಮೂರು ದಶಕಗಳಿಂದ ಕಡತದಲ್ಲಿ ಉಳಿದಿದ್ದ ವರದಿಗೆ ಈಗ ಮರುಜೀವ ಬಂದಿದೆ. ಕನ್ನಡಿಗರಿಗೆ ಖಾಸಗಿ ಉದ್ದಿಮೆಗಳ ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದೆ. ಅಧಿವೇಶನದಲ್ಲಿ ಜಾರಿಗೊಳಿಸದಿದ್ದರೆ ಗೋಕಾಕ್ ಮಾದರಿ ಚಳವಳಿ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಖಾಸಗಿ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ಆಂಧ್ರಪ್ರದೇಶ ವಿಧಾನಸಭೆ ಅನುಮೋದನೆ ನೀಡಿದೆ. ಮಹಾರಾಷ್ಟ್ರದಲ್ಲೂ ಮೀಸಲಾತಿ ತರಲು ಉದ್ದೇಶಿಸಲಾಗಿದೆ. ತಮಿಳುನಾಡು, ಮಧ್ಯಪ್ರದೇಶ, ಗುಜರಾಜತ್, ಸಿಕ್ಕಿಂ, ಒಡಿಸ್ಸಾ ರಾಜ್ಯ ಸರಕಾರಗಳು ಮುಂದಾಗಿವೆ. ಆದರೆ, ನಮ್ಮ ರಾಜ್ಯದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಕಿಡಿಕಾರಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ಉಪಾಧ್ಯಕ್ಷ ಡಾ.ದೇವನಹಳ್ಳಿ ದೇವರಾಜು, ಎಸ್.ಶಿವಕುಮಾರ್, ಎ.ನಾಗೇಂದ್ರ, ಎನ್.ಸಿ.ಸಾಗರ, ಸಂತೋಷ್ ಕಾಂಬಳೆ, ಕಾಂತರಾಜು, ಉಮ್ಮಡಹಳ್ಳಿ ನಾಗೇಶ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News