ಸುಮಲತಾ ಕಾರ್ಯಕ್ರಮಕ್ಕೆ ಶಾಸಕ ಶ್ರೀನಿವಾಸ್ ಆಕ್ಷೇಪ: ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ರದ್ದು

Update: 2020-02-13 17:59 GMT

ಮಂಡ್ಯ, ಫೆ.13: ತಮ್ಮ ಸ್ವಗ್ರಾಮ ಹನಕೆರೆಯಲ್ಲಿ ನಿವೇಶನ ರಹಿತರಿಗೆ ಸಂಸದೆ ಸುಮಲತಾ ಅಂಬರೀಷ್ ಅವರು ಹಕ್ಕುಪತ್ರ ವಿತರಿಸಲು ಶಾಸಕ ಎಂ.ಶ್ರೀನಿವಾಸ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಗುರುವಾರ ನಡೆಯಬೇಕಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ರದ್ದಾಗಿದೆ.

ಹನಕೆರೆಯಲ್ಲಿ ಗುರುವಾರ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ನನಗೆ ಮಾಹಿತಿ ಇಲ್ಲ. ರಾಜ್ಯ ಸರಕಾರದ ಕಾರ್ಯಕ್ರಮವನ್ನು ಸಂಸದರು ನಡೆಸುವುದಕ್ಕೆ ಅಧಿಕಾರಿ ಕೊಟ್ಟವರು ಯಾರು. ಕ್ಷೇತ್ರದ ಶಾಸಕನಾಗಿ ನಾನೇಕೆ ಇರಬೇಕು. ಉದ್ದೇಶಪೂರ್ವಕವಾಗಿ ನನ್ನನ್ನು ದೂರವಿಟ್ಟು ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಗ್ಗೆ ಸದನಲ್ಲಿ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ ಎಂದು ಶಾಸಕ ಎಂ.ಶ್ರೀನಿವಾಸ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸದರಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ರದ್ದುಪಡಿಸಿ ಮುಂದೂಡಿತು. ಆದರೆ, ಸಂಸದೆ ಸುಮಲತಾ ಗ್ರಾಮದ ಪ್ರವಾಸವನ್ನು ರದ್ದುಪಡಿಸದೆ ಗ್ರಾಮಕ್ಕೆ ಭೇಟಿ ನೀಡಿ ನಿವೇಶನ ರಹಿತರ ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿದರು.

ಪ್ರಕರಣದ ಹಿನ್ನೆಲೆ: ಶಾಸಕ ಎಂ.ಶ್ರೀನಿವಾಸ್ ಗ್ರಾಮವಾದ ಹನಕೆರೆ ವ್ಯಾಪ್ತಿಯ ಹಲಸಗೆರೆಯ ಸರ್ವೆ ನಂ.33/3ನ 36 ಗುಂಟೆ ಜಮೀನನ್ನು ಬಡವರಿಗೆ ನಿವೇಶನ ಹಂಚಲು ಭೂಸ್ವಾಧೀನ ಮಾಡಲಾಗಿತ್ತು. ಸ್ಥಳೀಯರೊಬ್ಬರು ನ್ಯಾಯಾಲಯದ ಮೆಟ್ಟಿಲು ಏರಿದ ಹಿನ್ನೆಲೆಯಲ್ಲಿ ಯೋಜನೆ ನೆನೆಗುದಿಗೆ ಬಿದ್ದಿತ್ತು.

ಹೈಕೋರ್ಟ್ ನಿವೇಶನರಹಿತರ ಪರ ತೀರ್ಪು ನೀಡಿ ವಿವಾದ ಕೊನೆಗೊಳಿಸಿತ್ತು. ಗ್ರಾಮ ಪಂಚಾಯತ್ ಆಡಳಿತ ನಿವೇಶನ ರಹಿತರನ್ನು ಗುರುತಿಸಲು ತಡ ಮಾಡಿದ ಪರಿಣಾಮ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮಸಭೆ ನಡೆದು 24 ಫಲಾನುಭವಿಗಳು ಹಾಗೂ 4 ಸರಕಾರಿ ಕಚೇರಿಗೆ ನಿವೇಶನ ಕಾಯ್ದಿರಿಸಿ ಅಧಿಕಾರಿಗಳು ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುಮೋದನೆ ಪಡೆದಿದ್ದರು.

ನಾಡಕಚೇರಿ ನಿರ್ಮಾಣ ಬಿಟ್ಟು ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಪಾರದರ್ಶಕವಾಗಿಲ್ಲ ಎಂದು ಶಾಸಕ ಎಂ.ಶ್ರೀನಿವಾಸ್ ಅವರು ಆರೋಪಿಸಿ ಹಕ್ಕುಪತ್ರ ನೀಡದಂತೆ ಮತ್ತು ಲಾಟರಿ ಮೂಲಕ ಆಯ್ಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದೆ. 

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತನಿಖೆ ನಡೆಸಿದ ಉಪ ವಿಭಾಗಾಧಿಕಾರಿ ನಿವೇಶನ ರಹಿತರ ಆಯ್ಕೆ ಪಾರದರ್ಶಕವಾಗಿದೆ ಎಂದು ವರದಿ ನೀಡಿದ ಬಳಿಕ ಅಂತಿಮ ಹಂತದ ಪ್ರಕ್ರಿಯೆಗೆ ಜಿಲ್ಲಾಡಳಿತ ಗುರುವಾರ (ಫೆ.13) ಕಾರ್ಯಕ್ರಮ ರೂಪಿಸಿ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಆಹ್ವಾನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News