ವಾಹನಗಳ ನಂಬರ್ ಪ್ಲೇಟ್ ಮೇಲೆ ಲಾಂಛನಗಳ ದುರುಪಯೋಗ: ಪರಿಣಾಮಕಾರಿ ಕ್ರಮಕ್ಕೆ ಹೈಕೋರ್ಟ್ ಸೂಚನೆ

Update: 2020-02-13 18:11 GMT

ಬೆಂಗಳೂರು, ಫೆ.13: ರಾಷ್ಟ್ರೀಯ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಲಾಂಛನ ಮತ್ತು ಹೆಸರುಗಳನ್ನು ವಾಹನಗಳ ನಂಬರ್ ಪ್ಲೇಟ್ ಮೇಲೆ ಬರೆಸಿಕೊಂಡು ವಿವಿಧ ಸಂಘ ಸಂಸ್ಥೆಗಳ ಹೆಸರಿನಲ್ಲಿ ದುರುಪಯೋಗ ಪಡಿಸಿಕೊಳ್ಳುವುದನ್ನು ತಡೆಯಲು ಪರಿಣಾಮಕಾರಿ ಕ್ರಮಕ್ಕೆ ಮುಂದಾಗಬೇಕು ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ತಾಕೀತು ಮಾಡಿದೆ.

ಮಂಗಳೂರಿನ ಆನಂದ ಶೆಟ್ಟಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಕುರಿತಂತೆ ಗುರುವಾರ ಆದೇಶಿಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ದುರುಪಯೋಗ ತಡೆ ನಿಟ್ಟಿನಲ್ಲಿ ತಮಿಳುನಾಡು ಸರಕಾರವು, ಸಂಘಸಂಸ್ಥೆಗಳ ನೋಂದಣಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೈಗೊಂಡಿರುವ ಪರಿಣಾಮ ಕ್ರಮಗಳನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಎಲ್ಲ ಸದಸ್ಯರಿಗೂ ಮಾನವ ಹಕ್ಕುಗಳ ಲಾಂಛನ ಮತ್ತು ಹೆಸರು ದುರುಪಯೋಗ ತಡೆ ಕುರಿತ ಮಾಹಿತಿ ತಕ್ಷಣವೇ ಲಭ್ಯವಾಗಬೇಕು. ಈ ದಿಸೆಯಲ್ಲಿ ಕೈಗೊಂಡ ಎಲ್ಲ ಕ್ರಮಗಳ ಕುರಿತು ವರದಿ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಫೆ. 25ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News