ಫೆ.17ಕ್ಕೆ ಜಂಟಿ ಅಧಿವೇಶನ, ಮಾ.5ಕ್ಕೆ ಬಜೆಟ್: ಸುದ್ದಿವಾಹಿನಿಗಳ ಕ್ಯಾಮರಾಗಳಿಗೆ ನಿರ್ಬಂಧ
ಬೆಂಗಳೂರು, ಫೆ. 14: ಹದಿನೈದನೆ ವಿಧಾನಸಭೆಯ ವರ್ಷದ ಮೊದಲ ಅಧಿವೇಶನ ಫೆ.17ರಿಂದ ಆರಂಭಗೊಳ್ಳಲಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರು ವಿಧಾನ ಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.17ರಿಂದ ಫೆ.20ರ ವರೆಗೆ ಅಧಿವೇಶನ ನಡೆಯಲಿದ್ದು, ಸಂತಾಪ, ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಸಂವಿಧಾನದ ಬಗ್ಗೆ ವಿಶೇಷ ಚರ್ಚೆ: ಮಾ.2 ಮತ್ತು 3ರಂದು ಸಂವಿಧಾನದ ಆಶಯಗಳು, ಸ್ವರೂಪ ಹಾಗೂ ಸಾಕಾರ ಕುರಿತಂತೆ ವಿಧಾನಸಭೆಯಲ್ಲಿ ಎರಡು ದಿನಗಳ ವಿಶೇಷ ಚರ್ಚೆ ನಡೆಯಲಿದೆ. ಸಂವಿಧಾನ ಅಂಗೀಕಾರ, ಅನುಷ್ಠಾನಗೊಂಡು 70 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಾಜಕೀಯೇತರ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಂವಿಧಾನದ ಕುರಿತು ಅರ್ಥಗರ್ಭಿತ ಚರ್ಚೆ ನಡೆಸಬೇಕು ಎಂದ ಅವರು, ಸದನ ಕಲಾಪ ಸಲಹಾ ಸಮಿತಿ(ಬಿಎಸ್‌ಸಿ)ಯಲ್ಲಿ ಕಾರ್ಯಕ್ರಮದ ರೂಪುರೇಷಗಳ ಬಗ್ಗೆ ಚರ್ಚಿಸಿ, ರಚನಾತ್ಮಕ ಚರ್ಚೆಗೆ ನೀಲನಕ್ಷೆ ಸಿದ್ಧಪಡಿಸಲಾಗುವುದು ಎಂದರು.
ಮಾ.5ಕ್ಕೆ ಆಯವ್ಯಯ: ಮಾರ್ಚ್ 5ಕ್ಕೆ ಹಣಕಾಸು ಸಚಿವರೂ ಆಗಿರುವ ಸಿಎಂ ಯಡಿಯೂರಪ್ಪ ಆಯವ್ಯಯ ಮಂಡಿಸಲಿದ್ದಾರೆ. ಲೋಕಾಯುಕ್ತ(ತಿದ್ದುಪಡಿ), ನಾವೀನ್ಯತಾ ಪ್ರಾಧಿಕಾರ, ರಾಷ್ಟ್ರೀಯ ಕಾನೂನು ವಿವಿ (ತಿದ್ದುಪಡಿ), ರಾಜ್ಯ ಭಾಷಾ (ತಿದ್ದುಪಡಿ), ನಗರಪಾಲಿಕೆಗಳ (ತಿದ್ದುಪಡಿ) ಹಾಗೂ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ(ತಿದ್ದುಪಡಿ) ಸೇರಿ 6 ವಿಧೇಯಕಗಳ ಮಂಡನೆ ಮಾಡಲಾಗುವುದು ಎಂದರು.
ಮಾರ್ಚ್ 31ರ ವರೆಗೆ ಒಟ್ಟು ಇಪ್ಪತ್ತೈದು ದಿನಗಳ ದೀರ್ಘ ಅವಧಿ ಅಧಿವೇಶನ ನಡೆಯಲಿದ್ದು, ಪ್ರಶ್ನೋತ್ತರ ಸೇರಿದಂತೆ ವಿವಿಧ ಕಲಾಪಗಳು ನಡೆಯಲಿವೆ. ಈ ಅಧಿವೇಶನದಲ್ಲಿ ರಾಜ್ಯದ ಅಭಿವೃದ್ಧಿ ಕುರಿತ ಚರ್ಚೆಗೆ ವಿಫುಲ ಅವಕಾಶ ದೊರೆಯಲಿದೆ ಎಂದು ಕಾಗೇರಿ ತಿಳಿಸಿದರು.
ಸುದ್ದಿವಾಹಿನಿಗಳಿಗೆ ನಿರ್ಬಂಧ: ಲೋಕಸಭೆ ಮತ್ತು ರಾಜ್ಯಸಭೆ ಮಾದರಿಯಲ್ಲಿ ಕಲಾಪದ ವೇಳೆ ಖಾಸಗಿ ಸುದ್ದಿವಾಹಿನಿಗಳ ಕ್ಯಾಮರಾಗಳಿಗೆ ನಿರ್ಬಂಧ ಹೇರಲಾಗಿದೆ. ಆದರೆ, ದೂರದರ್ಶನವು ಕಲಾಪವನ್ನು ಚಿತ್ರೀಕರಿಸಿ ಬ್ರಾಂಡ್‌ವಿಡ್ತ್ ಸಂಕೇತಗಳ ಮೂಲಕ ಖಾಸಗಿ ವಾಹಿನಿಗಳಿಗೆ ಕಲಾಪದ ಚಿತ್ರಣವನ್ನು ನೀಡಲಿದೆ ಎಂದು ಸ್ಪೀಕರ್ ಕಾಗೇರಿ ಸ್ಪಷ್ಟನೆ ನೀಡಿದರು. ಸುದ್ಧಿಗೋಷ್ಠಿಯಲ್ಲಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಹಾಜರಿದ್ದರು.
‘ಯಾವುದೇ ಕಾರಣಕ್ಕೂ ಸದನದ ಕಲಾಪ ವರದಿಗಾರಿಕೆಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಿಲ್ಲ. ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿರುವ ಮಾಧ್ಯಮಕ್ಕೆ ತನ್ನದೆ ಆದ ಸ್ವಾತಂತ್ರವಿದೆ. ಲೋಕಸಭೆ ಮತ್ತು ರಾಜ್ಯಸಭೆ ಮಾದರಿಯಲ್ಲಿನ ವ್ಯವಸ್ಥೆಯನ್ನೂ ಇಲ್ಲಿಯೂ ಅಳವಡಿಸಿಕೊಳ್ಳಲಾಗುತ್ತಿದೆ’
-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆ ಸ್ಪೀಕರ್
‘ವಿಧಾನ ಮಂಡಲ ಅಧಿವೇಶನ ಕಲಾಪ ವರದಿಗಾರಿಕೆಗೆ ಖಾಸಗಿ ಸುದ್ದಿವಾಹಿನಿಗಳ ಕ್ಯಾಮರಾಗಳಿಗೆ ನಿರ್ಬಂಧ ಹೇರುವುದು ಸರಿಯಲ್ಲ. ಸ್ಪೀಕರ್ ಕಾಗೇರಿಯವರ ಅವಧಿಯಲ್ಲಿ ಮಾಧ್ಯಮಗಳನ್ನು ಹೊರಗಿಡುವ ಮೂಲಕ ಕೆಟ್ಟ ಸಂಪ್ರದಾಯ ಜಾರಿಗೆ ನಮ್ಮ ಸ್ಪಷ್ಟ ವಿರೋಧ’
-ಎಚ್.ಡಿ.ರೇವಣ್ಣ, ಮಾಜಿ ಸಚಿವ