ಅಸಮರ್ಥ ಸಚಿವರನ್ನು ನಿರ್ದಾಕ್ಷಿಣ್ಯವಾಗಿ ಮನೆಗೆ ಕಳಿಸಿ: ಬಿಜೆಪಿ ಶಾಸಕ ಯತ್ನಾಳ್ ಕಿಡಿ

Update: 2020-02-14 17:50 GMT

ವಿಜಯಪುರ, ಫೆ.14: ಬಜೆಟ್ ಅಧಿವೇಶನದ ಬಳಿಕ ಸಚಿವ ಸಂಪುಟ ಪುನರ್ ರಚನೆಯಾಗಬಹುದು. ಆ ಸಂದರ್ಭದಲ್ಲಿ ಸಚಿವರ ಮೌಲ್ಯಮಾಪನ ನಡೆಸಿ ಅಸಮರ್ಥ ಸಚಿವರನ್ನು ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ನಾಲ್ಕೈದು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಬದಲಾವಣೆಯಾಗಲಿದೆ. ಅಸಮರ್ಥ ಸಚಿವರನ್ನು ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಬೇಕು, ಅವರು ಗೌರವಯುತವಾಗಿ ಶಾಸಕರಾಗಿ ಉಳಿಯಲಿ ಎಂದು ಸ್ವಪಕ್ಷೀಯ ಸಚಿವರ ವಿರುದ್ಧವೇ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಜೆಟ್ ಅಧಿವೇಶನದ ಬಳಿ ಸಚಿವ ಸಂಪುಟ ರಚನೆಯಾಗಲೇಬೇಕು. ರಾಜ್ಯದ ಬೆಳವಣಿಗೆಗಳನ್ನು ಹೈಕಮಾಂಡ್ ಗಮನಿಸುತ್ತಿದೆ. ಪ್ರತಿನಿತ್ಯದ ಬೆಳವಣಿಗೆಗಳ ಬಗ್ಗೆ ಕೇಂದ್ರ ಗೃಹ ಸಚಿವರು ಮಾಹಿತಿ ಪಡೆಯುತ್ತಿದ್ದಾರೆ. ಪ್ರಧಾನಿ ಕೇಂದ್ರ ಸಚಿವರ ಮೌಲ್ಯಮಾಪನ ಮಾಡುತ್ತಾರೆ. ಅದೇ ರೀತಿ ರಾಜ್ಯ ಸಚಿವರ ಮೌಲ್ಯಮಾಪನ ಮಾಡಬೇಕಿದೆ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಗಂಭೀರ ಪರಿಣಾಮ ಉಂಟಾಗಲಿದೆ. ಹೈಕಮಾಂಡ್ ಕಣ್ಣು ಮುಚ್ಚಿ ಕುಳಿತಿಲ್ಲ. ಎಲ್ಲವನ್ನು ಗಮನಿಸುತ್ತಿದೆ ಎಂದು ತಿಳಿಸಿದರು.

ಕೆಲವೊಂದು ಸಚಿವರನ್ನು ಬದಲಾವಣೆ ಮಾಡಬೇಕಾಗುತ್ತದೆ, ಈ ನಿಟ್ಟಿನಲ್ಲಿ ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎನ್ನುವ ವಿಶ್ವಾಸವಿದೆ. ಬಜೆಟ್ ಅಧಿವೇಶನದ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಬಹುದು. ಉಮೇಶ್ ಕತ್ತಿ ಅವರು ಈಗಾಗಲೇ ಹೈಕಮಾಂಡ್ ಭೇಟಿ ಮಾಡಿದ್ದಾರೆ. ನನ್ನ ಜೊತೆಯೂ ಅವರು ಮಾತನಾಡಿದ್ದಾರೆ. ಯಾವ ಸಚಿವರ ಕುಟುಂಬ ಹಸ್ತಕ್ಷೇಪ ಮಾಡುತ್ತಿದೆ ಎಂಬ ಬಗ್ಗೆಯೂ ಹೈಕಮಾಂಡಿಗೆ ಮಾಹಿತಿ ಇದೆ. ಹೈಕಮಾಂಡ್ ಈ ವಿಷಯದಲ್ಲಿ ತುಂಬಾ ಗಂಭೀರವಾಗಿದೆ. ಸರ್ಕಾರದಲ್ಲಿ ಸುಧಾರಣೆಯಾಗದಿದ್ದರೆ ಶಾಸಕರು ಯಾರ ಬಳಿ ಹೋಗಿ ನಿಲ್ಲಬೇಕು? ಎಂದು ಪ್ರಶ್ನಿಸಿದ ಅವರು, ಈ ನಿಟ್ಟಿನಲ್ಲಿ ಹೈಕಮಾಂಡ್ ಉತ್ತಮ ನಿರ್ಧಾರ ಕೈಗೊಳ್ಳಬಹುದು ಎಂದರು.

ಪುಲ್ವಾಮ ಘಟನೆ ಕುರಿತ ರಾಹುಲ್ ಗಾಂಧಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್‍ಗೆ ಬುದ್ದಿ ಬಂದಿಲ್ಲ ಎಂದು ಇದು ಮತ್ತೊಮ್ಮೆ ಫ್ರೂವ್ ಮಾಡಿದೆ. ರಾಹುಲ್ ಗಾಂಧಿ ಮೆಚ್ಯೂರಿಟಿ, ಪಕ್ವತೆ ಇಲ್ಲದೇ ಮಾತನಾಡಿದ್ದಾರೆ. ಕಾಂಗ್ರೆಸ್‍ಗೆ ಸೈನಿಕರ ಬಗ್ಗೆ ಗೌರವವಿಲ್ಲ, ರಾಹುಲ್ ಗಾಂಧಿ ಜೋಕರ್ ಅಷ್ಟೇ ಅಲ್ಲ, ರಾಜಕೀಯ ವ್ಯವಸ್ಥೆಯ ಜೋಕರ್ ಎಂಬುದನ್ನು ಸಾಬೀತುಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News