ಎನ್.ಆರ್.ಪುರ: ಮತ್ತೆ ಇಬ್ಬರಲ್ಲಿ ಮಂಗನ ಕಾಯಿಲೆ ಪತ್ತೆ

Update: 2020-02-14 17:54 GMT


ಚಿಕ್ಕಮಗಳೂರು, ಫೆ.14: ನೆರೆ ಜಿಲ್ಲೆ ಶಿವಮೊಗ್ಗದ ಜನರ ಆತಂಕಕ್ಕೆ ಕಾರಣವಾಗಿದ್ದ ಮಂಗನಕಾಯಿಲೆ ಇದೀಗ ಚಿಕ್ಕಮಗಳೂರು ಜನರಲ್ಲೂ ಆತಂಕ ಹುಟ್ಟುಹಾಕುತ್ತಿದೆ. ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಲ್ಲಿ ಮಂಗನಕಾಯಿಲೆ ಕಾಯಿಲೆ ಹರಡುತ್ತಿರುವುದನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ದೃಢಪಡಿಸುತ್ತಿದ್ದು, ಇತ್ತೀಚೆಗೆ ಮೂವರಲ್ಲಿ ಕಾಣಿಸಿಕೊಂಡಿದ್ದ ಈ ಕಾಯಿಲೆ ಶುಕ್ರವಾರ ಮತ್ತೆ ಇಬ್ಬರಿಗೆ ಹರಡಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ.

ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದ ಮುತ್ತಿನಕೊಪ್ಪ ಎಸ್ಟೇಟ್‍ನಲ್ಲಿ ಕೂಲಿ ಕೆಲಕ್ಕೆ ಬಂದಿದ್ದ ಇಬ್ಬರು ಅಸ್ಸಾಂ ಮೂಲದ ಕಾರ್ಮಿಕರು ಹಾಗೂ ಓರ್ವ ಓರಿಸ್ಸಾ ಮೂಲದ ಕಾರ್ಮಿಕರಲ್ಲಿ ಮಂಗನಕಾಯಿಲೆ ಇರುವುದನ್ನು ಜಿಲ್ಲಾ ಆರೋಗ್ಯ ಇಲಾಖೆ ದೃಢಪಡಿಸಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಅದೇ ಗ್ರಾಮದ ಕೂಲಿ ಕಾರ್ಮಿಕರಿಬ್ಬರ ರಕ್ತದ ಮಾದರಿಗಳಲ್ಲೂ ಕೆಎಫ್‍ಡಿ ವೈರಾಣು ಇರುವುದು ಪ್ರಯೋಗಾಲಯದ ವರದಿಗಳಿಂದ ದೃಢಪಟ್ಟಿದೆ. ಜ್ವರ ಎಂದು ಹೇಳಿಕೊಂಡು ಆಸ್ಪತ್ರೆ ಸೇರಿದ್ದ ಈ ಕಾರ್ಮಿಕರಲ್ಲಿ ಮಂಗನಕಾಯಿಲೆ ಲಕ್ಷಣಗಳಿದ್ದವು. ಈ ಶಂಕೆ ಮೇಲೆ ಇವರ ರಕ್ತದ ಮಾದರಿಗಳನ್ನು ಶಿವಮೊಗ್ಗಕ್ಕೆ ಕಳಿಸಿಕೊಡಲಾಗಿತ್ತು. ಶುಕ್ರವಾರ ಪ್ರಯೋಗಾಲಯದ ವರದಿ ಬಂದಿದ್ದು, ಇಬ್ಬರಲ್ಲೂ ವೈರಾಣು ಇರುವುದು ಪತ್ತೆಯಾಗಿದೆ ಎಂದು ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಐವರು ಕಾರ್ಮಿಕರು ಮಂಗನ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರ್ಮಿಕರೆಲ್ಲರೂ ಮಡಬೂರು ಗ್ರಾಮದಲ್ಲಿರುವ ಕಾಫಿ ಎಸ್ಟೇಟ್‍ಗೆ ಹೊರ ರಾಜ್ಯಗಳಿಂದ ಕೂಲಿಗೆ ಬಂದ ಕಾರ್ಮಿಕರಾಗಿದ್ದಾರೆಂದು ತಿಳಿದು ಬಂದಿದೆ. ರೋಗ ಪೀಡಿತರಿಗೆ ಜಿಲ್ಲಾ ಆರೋಗ್ಯ ಇಲಾಖೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗ ಕಂಡು ಬಂದಿರುವ ಮಡಬೂರು ಗ್ರಾಮದಲ್ಲಿ ವೈರಾಣುಗಳ ಸಂಗ್ರಹ ಹಾಗೂ ಡಿಎಂಪಿ ತೈಲಗಳು ಹಾಗೂ ಸಾರ್ವಜನಿಕರಿಗೆ ಲಸಿಕೆಗಳನ್ನು ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News