ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ದೇಶದ್ರೋಹಿಗಳೆಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್

Update: 2020-02-15 05:27 GMT
ಸಾಂದರ್ಭಿಕ ಚಿತ್ರ

ಮುಂಬೈ, ಫೆ.15: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರನ್ನು ‘ದೇಶದ್ರೋಹಿ’ಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟಿನ ಔರಂಗಾಬಾದ್ ಪೀಠ ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದೆ.

ಬೀಡ್ ಜಿಲ್ಲೆಯ ಮಜಲಗಾಂವ್ ಎಂಬಲ್ಲಿನ ಹಳೆ ಈದ್ಗಾ ಮೈದಾನದಲ್ಲಿ ಸಿಎಎ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿ ಜನವರಿ 31ರ ಮ್ಯಾಜಿಸ್ಟ್ರೇಟ್ ಆದೇಶ ಹಾಗೂ ಜನವರಿ 21ರ ಪೊಲೀಸ್ ಆದೇಶವನ್ನು ಪ್ರಶ್ನಿಸಿ ಇಫ್ತಿಕಾರ್ ಶೇಖ್ ಎಂಬವರು ಸಲ್ಲಿಸಿದ್ದ ಅಪೀಲಿನ ಮೇಲಿನ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಟಿ.ವಿ.ನಲವಡೆ ಹಾಗೂ ಎಂ.ಜಿ.ಸೇವಿಲ್ಕರ್ ಅವರನ್ನೊಳಗೊಂಡ ವಿಭಾಗೀಯ ಪೀಠ ನಡೆಸಿದ ಸಂದರ್ಭ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ ಅಪೀಲುದಾರರಿಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದೆ.

ಕಾಯ್ದೆ ವಿರುದ್ಧದ ತಮ್ಮ ನಿಲುವನ್ನು ತೋರ್ಪಡಿಸಲು ತಾವು ಶಾಂತಿಯುತ ಪ್ರತಿಭಟನೆಯನ್ನಷ್ಟೇ ನಡೆಸುವುದಾಗಿ ಅಪೀಲುದಾರರು ಹೇಳಿದ್ದಾರೆ.
‘‘ಇಂತಹ ಜನರು ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆಂಬ ಏಕೈಕ ಕಾರಣಕ್ಕೆ ಅವರನ್ನು ದೇಶದ್ರೋಹಿಗಳು, ದೇಶವಿರೋಧಿಗಳೆಂದು ಕರೆಯಲು ಸಾಧ್ಯವಿಲ್ಲ, ನಾವು ಒಂದು ಪ್ರಜಾಪ್ರಭುತ್ವ ದೇಶವೆಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಮ್ಮ ಸಂವಿಧಾನ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಆದರೆ ಇಂತಹ ಕಾನೂನು ಜಾರಿಯಾದಾಗ ಮುಸ್ಲಿಂ ಧರ್ಮದ ಕೆಲವರು ಇದು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿರುವುದರಿಂದ ಇದನ್ನು ವಿರೋಧಿಸಬೇಕಾಗಿದೆ ಎಂದು ತಿಳಿಯಬಹುದು’’ ಎಂದು ನ್ಯಾಯಾಲಯ ಹೇಳಿದೆ.

‘‘ಅಹಿಂಸಾತ್ಮಕ ಪ್ರತಿಭಟನೆಗಳಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ ಹಾಗೂ ಇದೇ ಅಹಿಂಸಾತ್ಮಕ ಹಾದಿಯನ್ನು ಜನರು ಇಂದಿಗೂ ಅನುಸರಿಸುತ್ತಿದ್ದಾರೆ. ಈ ದೇಶದ ಹೆಚ್ಚಿನ ಜನರು ಇನ್ನೂ ಅಹಿಂಸೆಯಲ್ಲಿ ನಂಬಿಕೆಯಿರಿಸಿರುವುದು ನಮ್ಮ ಅದೃಷ್ಟ’’ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News