ಬೆಂಕಿಗಾಹುತಿಯಾದ ಶಾಲಾ ವ್ಯಾನ್‍: ನಾಲ್ವರು ಮಕ್ಕಳ ಸಜೀವದಹನ

Update: 2020-02-15 11:52 GMT
Photo: twitter.com/arsh_kaur7

ಚಂಡೀಗಢ: ಪಂಜಾಬ್ ರಾಜ್ಯದ ಸಂಗ್ರೂರ್ ಎಂಬಲ್ಲಿ ಶಾಲಾ ವ್ಯಾನ್ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಕನಿಷ್ಠ ನಾಲ್ಕು ಮಕ್ಕಳು ಸಜೀವ ದಹನಗೊಂಡ ಘಟನೆ ಇಂದು ನಡೆದಿದೆ. ಈ ವ್ಯಾನ್ ಸಂಗ್ರೂರ್‍ನ ಪಬ್ಲಿಕ್ ಸ್ಕೂಲ್ ಒಂದಕ್ಕೆ ಸೇರಿತ್ತು.

ಹತ್ತಿರದ ಕೃಷಿಭೂಮಿಗಳಲ್ಲಿ ಕೆಲಸ ಮಾಡುತ್ತಿದ್ದ ಜನರು ತಕ್ಷಣ ಸ್ಥಳಕ್ಕೆ ಧಾವಿಸಿ ಎಂಟು ಮಕ್ಕಳನ್ನು ವಾಹನದಿಂದ ಸುರಕ್ಷಿತವಾಗಿ ಹೊರಕ್ಕೆ ತಂದಿದ್ದಾರೆ. ಮೃತಪಟ್ಟ ನಾಲ್ಕು ಮಕ್ಕಳೂ 10ರಿಂದ 12 ವರ್ಷ ವಯೋಮಿತಿಯವರಾಗಿದ್ದಾರೆ.

ಸಂಗ್ರೂರ್‍ ನ ಲೊಂಗೊವಾಲ್-ಸಿಡ್ಸಮಾಚಾರ್ ರಸ್ತೆಯಲ್ಲಿ ಈ ಘಟನೆ ನಡೆದಾಗ ಮಕ್ಕಳು ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದರು. ಬೆಂಕಿಗೆ ನಿಖರ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ. ವಾಹನದಲ್ಲಿ ಒಟ್ಟು 12 ಮಕ್ಕಳಿದ್ದರು.

ವ್ಯಾನ್ ಶಾಲೆಯಿಂದ ಹೊರಟು ಕೆಲವು ಮೀಟರ್ ದೂರ ತಲುಪಿದಾಗಲೇ ಅದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ  ಸ್ಥಳೀಯರೊಬ್ಬರು ತಕ್ಷಣ  ಚಾಲಕನಿಗೆ ಮಾಹಿತಿ ನೀಡಿದ್ದರು. ಆದರೆ ಅಷ್ಟರೊಳಗಾಗಿ ವಾಹನದ ಒಂದು ಬಾಗಿಲು ಜಾಮ್ ಆದ ಕಾರಣ ನಾಲ್ಕು ಮಕ್ಕಳು ದುರಂತ ಅಂತ್ಯ ಕಾಣುವಂತಾಯಿತು. ಮೃತಪಟ್ಟ ನಾಲ್ಕು ಮಕ್ಕಳ ಪೈಕಿ ಇಬ್ಬರು ಒಂದೇ ಕುಟುಂಬದವರೆಂದು ತಿಳಿದು ಬಂದಿದೆ.

ಹಿಂದಿನ ದಿನವಷ್ಟೇ ಶಾಲಾಡಳಿತ ಈ ವ್ಯಾನ್ ಖರೀದಿಸಿತ್ತೆನ್ನಲಾಗಿದ್ದು, ಅದು ಒಟ್ಟು ಎಂಟು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News