‘ಪಾಕಿಸ್ತಾನ ಪರ ಘೋಷಣೆ’ ಆರೋಪ: ಕಾಶ್ಮೀರ ಮೂಲದ ಹುಬ್ಬಳ್ಳಿಯ ಮೂವರು ಕಾಲೇಜು ವಿದ್ಯಾರ್ಥಿಗಳ ಬಂಧನ

Update: 2020-02-15 13:53 GMT

ಹುಬ್ಬಳ್ಳಿ, ಫೆ. 15: ಇಲ್ಲಿನ ಗೋಕುಲ ರಸ್ತೆಯಲ್ಲಿನ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆಂಬ ಆರೋಪ ಕೇಳಿಬಂದಿದ್ದು, ಆ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವಿದ್ಯಾರ್ಥಿಗಳನ್ನು ಅಮೀರ್, ಬಾಸಿತ್ ಹಾಗೂ ತಾಲೀಬ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಓದುತ್ತಿರುವ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿದೆ. ಪುಲ್ವಾಮಾ ದಾಳಿ ಸಂಭವಿಸಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶುಕ್ರವಾರ (ಫೆ.4) ವಿದ್ಯಾರ್ಥಿಗಳು ತಮ್ಮ ಕೊಠಡಿಯಲ್ಲಿ ವಿಡಿಯೋವೊಂದನ್ನು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಅದು ವೈರಲ್ ಆದ ಹಿನ್ನೆಲೆಯಲ್ಲಿ ಬಜರಂಗದಳದ ಕಾರ್ಯಕರ್ತರು ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಲೇಜು ಆಡಳಿತ ಮಂಡಳಿಗೆ ಒತ್ತಾಯಿಸಿದ್ದರು.

ಆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆ ಠಾಣಾ ಪೊಲೀಸರಿಗೆ ಕೆಎಲ್‌ಇ ಕಾಲೇಜಿನ ಆಡಳಿತ ಮಂಡಳಿ ದೂರು ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಇನ್ಸ್‌ಪೆಕ್ಟರ್ ನಾಗರಾಜ್ ಕಂಬಾರ, ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾಶ್ಮೀರದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ, ಕರೆದೊಯ್ಯುತ್ತಿದ್ದ ವೇಳೆ ಭಜರಂಗ ದಳ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಅಮಾನತು

ಸರಕಾರಿ ಕೋಟಾದಡಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಕೆಎಲ್‌ಇ ಕಾಲೇಜಿನಲ್ಲಿ ಸೀಟು ಪಡೆದಿದ್ದರು. ವಿದ್ಯಾರ್ಥಿಗಳ ವಿಡಿಯೊ ಗಮನಿಸಿ ಪೊಲೀಸರಿಗೆ ನಾವೇ ಮಾಹಿತಿ ನೀಡಿದ್ದೇವೆ. ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಅಮಾನತು ಮಾಡಲಾಗಿದೆ.

-ಡಾ.ಬಸವರಾಜ ಆನಾಮಿ, ಕೆಎಲ್‌ಇ ಕಾಲೇಜ್ ಪ್ರಾಂಶುಪಾಲ

ಬಿಜೆಪಿ ಸಹಿಸುವುದಿಲ್ಲ

ಪಾಕಿಸ್ತಾನ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ದೇಶದ್ರೋಹದ ಚಟುವಟಿಕೆಗಳನ್ನು ಬಿಜೆಪಿ ಸಹಿಸುವುದಿಲ್ಲ.

-ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

ದೇಶದ್ರೋಹ ಪ್ರಕರಣ

ಕೆಎಲ್‌ಇ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಓದುತ್ತಿದ್ದ ಮೂವರು ಕಾಶ್ಮೀರದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕಾಲೇಜು ಆಡಳಿತ ಮಂಡಳಿ ನೀಡಿದ ದೂರನ್ನು ಆಧರಿಸಿ, ಮೂವರ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

-ದಿಲೀಪ್, ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News