ಶಾಹೀನ್ ಶಾಲೆಯ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ಸೊಗಡು ಶಿವಣ್ಣ ವಾಗ್ದಾಳಿ

Update: 2020-02-15 18:20 GMT

ತುಮಕೂರು, ಫೆ.15: ಸಿದ್ದರಾಮಯ್ಯನವರು ನಾನೊಬ್ಬ ಮಾಜಿ ಮುಖ್ಯಮಂತ್ರಿ, ನಾಯಕ ಎನ್ನುವುದನ್ನು ಮರೆತು ಪ್ರಧಾನಿ ವಿರುದ್ಧದ ನಾಟಕ ಪ್ರದರ್ಶನಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಕಾಲೇಜುಗಳಲ್ಲಿ ಹಿಂದೆ ಮಹಮ್ಮದ್ ಘೋರಿ, ಇಸ್ಮಾಯಿಲ್, ಬಾಬರ್ ದೇಶದ್ರೋಹಿಗಳು ದೇಶಕ್ಕೆ ಮಾಡಬಾರದ ಕೆಲಸ ಮಾಡಿದ್ದಾರೆ ಎಂದು ನಾಟಕ ಪ್ರದರ್ಶಿಸುತ್ತಿದ್ದರು. ಆದರೆ, ಇಂದು ನಮ್ಮೊಳಗಿರುವ ಮೀರ್ ಸಾದಿಕ್‍ ಗಳು ಅದಕ್ಕೆ ಉತ್ತೇಜನ ನೀಡುತ್ತಿದ್ದಾರೆ. ದೇಶ ವಿಭಜನೆ ಮಾಡುವ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದಾರೆ. ಈ ರೀತಿ ನಿಲುವು ಹೊಂದಿರುವ ನಾಯಕರು ಯಾರೇ ಆದರೂ ಅವರನ್ನು ಜೈಲಿಗೆ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೀದರ್ ನ ಶಾಹೀನ್ ಶಾಲೆಯಲ್ಲಿ ದೇಶದ ಪ್ರಧಾನಿ ಮತ್ತು ಸಿಎಎ ವಿರೋಧಿಸಿ ನಾಟಕ ಪ್ರದರ್ಶಿಸಿರುವುದು ಶೋಚನೀಯ. ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕ ಮತ್ತು ಪೋಷಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಬೀದರ್ ಗೆ ಭೇಟಿ ನೀಡಿ ಇದಕ್ಕೆ ಉತ್ತೇಜನಕಾರಿ ಹೇಳಿಕೆ ನೀಡಿದ್ದಾರೆ. ಕಾನೂನು ವಿರುದ್ಧ ನಾಟಕ ಪ್ರದರ್ಶನ ಮಾಡಿರುವುದನ್ನು ಸಮರ್ಥಿಸಿಕೊಂಡಿರುವುದು ಖಂಡನೀಯ ಮತ್ತು ಅವರಿಗೆ ನಾಚಿಕೆಯಾಗಬೇಕು ಎಂದರು.

ನಾಟಕ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಸಂಭಾಷಣೆ ಇತ್ತು. ಈ ಸಂಬಂಧ ದೇಶದ್ರೋಹ ಆರೋಪದಡಿ ಪ್ರಕರಣ ದಾಖಲಾಗಿದೆ. ಮಕ್ಕಳಿಂದ ನಾಟಕ ಮಾಡಿಸಿದ ಅಲ್ಲಿಯ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಅರಿವಿಲ್ಲ. ಆ ರೀತಿಯ ನಾಟಕ ಮಾಡಿದರೆ ಮಕ್ಕಳ ಗತಿಯೇನು. ಮುಂದೆ ಸಮಾಜ ಉಳಿಯುತ್ತದೆಯೇ ಎಂದು ಪ್ರಶ್ನಿಸಿದರು.

ನಮ್ಮ ದೇಶದಲ್ಲಿಯೇ ಇದ್ದುಕೊಂಡು ನಮ್ಮನ್ನೇ ನಾವು ಟೀಕೆ ಮಾಡುವುದರಿಂದ ನಾಳೆ ಏನು ಆಘಾತ ಆಗುತ್ತದೆಯೋ ಗೊತ್ತಿಲ್ಲ. ಸರಕಾರದಲ್ಲಿ ಕೆಲಸ ಮಾಡಿ ಈ ರೀತಿಯ ವರ್ತನೆ ತೋರಿಸಿದರೆ ದೇಶದ ಗತಿಯೇನು. ದೇಶದ್ರೋಹ ಕೆಲಸ ಮಾಡಿರುವ ಸ್ಥಳಕ್ಕೆ ಹೋದ ಸಿದ್ದರಾಮಯ್ಯನವರಿಗೆ ನಾಚಿಕೆ ಇಲ್ಲವೇ. ಈ ರೀತಿ ಮಕ್ಕಳಿಗೆ ತರಬೇತಿ ನೀಡಿದರೆ ಅವರು ಸಿವಿಲ್ ಟೆರರಿಸ್ಟ್ ಗಳಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಯಡಿಯೂರಪ್ಪನವರು ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದಾರೆ. ಲಂಚಾವತಾರಕ್ಕೆ ಕಡಿವಾಣ ಹಾಕಬೇಕು. ಪಾಲಿಕೆ ಆಯುಕ್ತ ಟಿ.ಭೂ ಬಾಲನ್, ಕಂದಾಯ ಇಲಾಖೆಯಲ್ಲಿ ಕುರಿ ಮಂದೆಯಂತಾಗಿದ್ದ ದಲ್ಲಾಳಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಎಸ್ಪಿ ಡಾ.ಕೆ.ವಂಶಿಕೃಷ್ಣ ಅವರು ಕರ್ತವ್ಯ ಲೋಪ ಎಸಗಿದ್ದ ಪಾವಗಡದ ಎಸ್‍ಐ ರಾಘವೇಂದ್ರನನ್ನು ಅಮಾನತು ಮಾಡಿರುವುದು ಸಂತಸದ ವಿಚಾರ ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಡೀ ಭರತ ಖಂಡಕ್ಕೆ ಪ್ರಧಾನಿಯಾಗಿದ್ದವರು. ಹಾಸನ ಜಿಲ್ಲೆಗೆ ಮಾತ್ರ ಮಾಜಿ ಪ್ರಧಾನಿಯಾಗಬಾರದು. ಹಾಸನದ ಬಗ್ಗೆ ಮಾತನಾಡಲಿ. ಆದರೆ, ಪಕ್ಕದಲ್ಲಿರುವ ತುಮಕೂರಿನ ಜನತೆ ಎಷ್ಟು ವರ್ಷದಿಂದ ನೀರಿಗಾಗಿ ಆಹಾಕಾರ ಪಡುತ್ತಿದ್ದೇವೆ. ಹಾಸನದ ಜತೆಗೆ ತುಮಕೂರನ್ನು ಸೇರಿಸಿಕೊಂಡು ಮುಖ್ಯಮಂತ್ರಿ ಕಚೇರಿ ಮುಂದೆ ಸತ್ಯಾಗ್ರಹ ಮಾಡಲಿ. ತಾವು ಮಾಜಿ ಪ್ರಧಾನಿ, ಮಗ ಸಿಎಂ ಆಗಿದ್ದರು, ರೇವಣ್ಣ ಮೊದಲಿನಿಂದಲೂ ಮಂತ್ರಿಗಳಾಗಿದ್ದವರು. ಈ ಪರಿಸ್ಥಿತಿಯಲ್ಲಿ ಹಾಸನಕ್ಕೆ ಏನಾಗಿದೆ. ತುಮಕೂರಿಗೆ ನೀರಿಲ್ಲ ಎಂದು ಕೊರಗುತ್ತಿದ್ದೇವೆ. ಯಾವಾಗಲೂ ಹಾಸನಕ್ಕೆ ಮಾತ್ರ ಮಾಜಿ ಪ್ರಧಾನಿಯಾಗಬೇಡಿ ಎಂದು ತಿಳಿಸಿದರು.

ಪುಲ್ವಾಮ ದಾಳಿ ಮತ್ತು 370ನೇ ವಿಧಿ ರದ್ದತಿ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ಖಂಡನೀಯ. ಪುಲ್ವಾಮ ದಾಳಿಯಿಂದ ಯಾರಿಗೆ ಲಾಭ ಎಂದು ಪ್ರಶ್ನೆ ಕೇಳುವವರು ಜೋಕರ್ ಇದ್ದಂತೆ. 370ನೇ ವಿಧಿ ರದ್ದತಿಯಿಂದ ದೇಶಕ್ಕೆ ಲಾಭವಾಗಿದೆ. ತಾಯಿ, ಅಜ್ಜಿ ಇಬ್ಬರೂ ಅಧಿಕಾರ ನಡೆಸಿದ್ದಾರೆ. 370ನೇ ವಿಧಿ ರದ್ದುಗೊಳಿಸಿದ್ದು ರಾಹುಲ್ ಗಾಂಧಿ, ರಾಜೀವ್ ಗಾಂಧಿಯಲ್ಲ. ಅವರಿಗೆ ಈ ರೀತಿ ಮಾತನಾಡಲು ಯಾವುದೇ ಯೋಗ್ಯತೆಯಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್, ಗರುಡಯ್ಯ, ಬನಶಂಕರಿ ಬಾಬು, ಕೆ.ಹರೀಶ್, ದಯಾನಂದ್ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News