ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ಬಿಡುಗಡೆ: ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ

Update: 2020-02-16 14:43 GMT

ಬೆಂಗಳೂರು, ಫೆ.16: ಹುಬ್ಬಳ್ಳಿಯ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಾಶ್ಮೀರ ಮೂಲದ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲ್ಪಟ್ಟಿದ್ದರು. ಇದೀಗ ಪೊಲೀಸರು ಅವರನ್ನು ಬಿಡುಗಡೆ ಮಾಡಿರುವ ಕ್ರಮವನ್ನು ಕಾಂಗ್ರೆಸ್ ನಾಯಕರು ಕಟುವಾಗಿ ಟೀಕಿಸಿದ್ದಾರೆ.

ಪೊಲೀಸರು ರಾಜ್ಯ ಸರಕಾರದ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದು, ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ. ಒಂದೊಂದು ಪ್ರಕರಣವನ್ನು ಒಂದೊಂದು ರೀತಿಯಲ್ಲಿ ನೋಡುವ ಮೂಲಕ ತಾರತಮ್ಯ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಶಾಹೀನ್ ಶಾಲೆಯಲ್ಲಿ ನಾಟಕ ಮಾಡಿದ ವಿದ್ಯಾರ್ಥಿನಿಯ ತಾಯಿ ಹಾಗೂ ಶಿಕ್ಷಕಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದರು. ಪಾಕಿಸ್ತಾನದ ಪರವಾಗಿ ಘೋಷಣೆಗಳನ್ನು ಕೂಗಿ ನಿಜವಾದ ದೇಶದ್ರೋಹದ ಕೆಲಸ ಮಾಡಿರುವವರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಿ, ಎಲ್ಲ ವಿಚಾರಗಳನ್ನು ತಿಳಿದುಕೊಂಡು ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಚರ್ಚೆ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಮ್ಮ ರಾಜ್ಯದ ಪೊಲೀಸರು ಮೊದಲು ದಕ್ಷರಾಗಿದ್ದರು. ಆದರೆ, ಯಾಕೋ ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲೂ ರಾಜಕೀಯ ಹೊಕ್ಕಿರುವುದು ಕಂಡು ಬರುತ್ತಿದೆ. ದೇಶದೋಹ್ರದ ಆರೋಪ ಎದುರಿಸುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಬಿಡುಗಡೆ ಮಾಡಿದ್ದು ಏಕೆ ಎಂದು ಪ್ರಶ್ನಿಸಿದರು.

ಅನಂತಕುಮಾರ್ ಹೆಗಡೆ, ಸೋಮಶೇಖರ ರೆಡ್ಡಿ, ಸಿ.ಟಿ.ರವಿ ಇಂಥಹವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಹಾತ್ಮ ಗಾಂಧಿ ವಿರುದ್ಧ ಮಾತನಾಡಿದರೂ ಈವರೆಗೆ ಪ್ರಕರಣ ದಾಖಲಿಸಿಲ್ಲ. ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವವರ ವಿರುದ್ಧ ಯಾವುದೇ ತನಿಖೆ ಮಾಡದೆ ಬಿಟ್ಟು ಕಳುಹಿಸಲಾಗಿದೆ ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News