ನನ್ನ ಪರಿಸ್ಥಿತಿ ಯಾವೊಬ್ಬ ಯೋಧನ ಪತ್ನಿಗೂ ಬರಬಾರದು: ಮಂಡ್ಯದ ಯೋಧ ಗುರು ಪತ್ನಿ ಕಲಾವತಿ

Update: 2020-02-16 17:06 GMT

ಭಾರತೀನಗರ,ಫೆ.16: 'ನನ್ನ ಪರಿಸ್ಥಿತಿ ಯಾವೊಬ್ಬ ಯೋಧನ ಪತ್ನಿಗೂ ಬರಬಾರದು. ಪತಿಯ ಮರ್ಯಾದೆಗೋಸ್ಕರ ಎಲ್ಲಾ ತರಹದ ಕಿರುಕುಳ, ನೋವುಗಳನ್ನು ಸಹಿಸಿಕೊಂಡು ಬಂದಿದ್ದೇನೆ' ಎಂದು ಪುಲ್ವಾಮ ದಾಳಿಯಲ್ಲಿ ಮೃತರಾದ ಗುಡಿಗೆರೆ ಕಾಲೊನಿ ಗ್ರಾಮದ ಯೋಧ ಎಚ್.ಗುರು ಅವರ ಪತ್ನಿ ಕಲಾವತಿ ಅವರು ನೋವು ತೋಡಿಕೊಂಡರು.

ಭಾನುವಾರ ಮದ್ದೂರು- ಮಳವಳ್ಳಿ ಮುಖ್ಯರಸ್ತೆಯ ಮೆಳ್ಳಹಳ್ಳಿ ಬಳಿ ಮೃತ ಯೋಧನ ಪ್ರಥಮ ವರ್ಷದ ಪುಣ್ಯಸ್ಮರಣೆ ನಿಮಿತ್ತ ಆಯೋಜಿಸಿದ ಪೂಜಾ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೆದುರು ಅವರು ಮಾತನಾಡಿದರು. 'ನಾನು ಬದುಕಿನಲ್ಲಿ ತುಂಬಾ ಕನಸುಗಳನ್ನು ಕಟ್ಟಿಕೊಂಡಿದ್ದೆ. ನನಗೆ ಹಣ ಬೇಡ. ನನ್ನ ಯಜಮಾನರು ಬೇಕು. ಅವರಿಲ್ಲದೆ ನನಗೆ ಬದುಕಿನಲ್ಲಿ ನೆಮ್ಮದಿ ಇಲ್ಲದಾಗಿದೆ. ಹಣ ಹೊತ್ತುಕೊಂಡು ಹೋಗಿದ್ದಾರೆಂದು ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದಾರೆ. ಇದರಿಂದ ನಾನು ನೆಮ್ಮದಿ ಕಳೆದುಕೊಂಡಿದ್ದೇನೆ ಎಂದು ದೂರಿದರು.

ಪತಿ ಮೃತರಾದ ದಿನದಿಂದಲೂ ಒಂದಲ್ಲ ಒಂದು ಕಿರುಕುಳ ಕೊಟ್ಟಿದ್ದಾರೆ. ನನ್ನ ಮಗ ನಿನ್ನಿಂದ ಸತ್ತಿದ್ದಾನೆ. ಮನೆಯಲ್ಲಿದ್ದ ನನ್ನ ದಾಖಲಾತಿಗಳನ್ನು ತೆಗೆದುಕೊಂಡು ಹೋಗಲು ಬಂದಾಗ ಹಣ ಹೊತ್ತುಕೊಂಡು ಹೋಗುತ್ತಿದ್ದಾಳೆಂದು ಗೋಳಾಡಿ ಗ್ರಾಮಸ್ಥರೆದುರು ನನ್ನ ಮರ್ಯಾದೆ ಕಳೆದಿದ್ದಾರೆ ಎಂದು ಅತ್ತೆ ಚಿಕ್ಕೋಳಮ್ಮ ವಿರುದ್ಧ ಕಿಡಿಕಾರಿದರು.

ನನ್ನ ಮೊಬೈಲ್‍ನಲ್ಲಿದ್ದ ಫೋಟೋಗಳನ್ನು ಅಳಿಸಿ ಹಾಕುವುದರ ಜೊತೆಗೆ ಮನೆಯಲ್ಲಿ ಪತಿಯ ಭಾವಚಿತ್ರಕ್ಕೆ ಪೂಜೆ ಮಾಡಲು ಬಿಡಲಲ್ಲ. ಪತಿಯ ತಿಥಿ ಕಾರ್ಯಕ್ಕೂ ಮುನ್ನವೇ ನನಗೆ ಮಾಂಗಲ್ಯ ಸರ ಮಾಡಿಸಿಕೊಟ್ಟಿದ್ದ ಹಣವನ್ನು ಪಡೆದುಕೊಂಡಿದ್ದಾರೆ. ಮೈದುನನನ್ನು ಮದುವೆ ಮಾಡಿಕೊಳ್ಳುವಂತೆ ಬೇರೆಯವರ ಮೂಲಕ ಹೇಳಿಸಿ ನನಗೆ ಮಾನಸಿಕ ಯಾತನೆ ನೀಡಿದ್ದಾರೆ. ವಾರ್ಷಿಕ ಪುಣ್ಯಸ್ಮರಣೆ ವಿಚಾರವಾಗಿ ಮಾತನಾಡಲು ಪತಿಯ ಮನೆಗೆ ಹೋದ ನನ್ನ ತಂದೆಯನ್ನು ಮೈದುನ ಮಧು ಅವಾಚ್ಯ ಪದಗಳಿಂದ ಬೈದು ಕಳುಹಿಸಿದ್ದಾನೆ ಎಂದು ಅಳಲು ತೋಡಿಕೊಂಡರು.

ಹಿಂದೂ ಶಾಸ್ತ್ರದ ಪ್ರಕಾರ ಮಣ್ಣು ಮಾಡಿದ ದಿನದಿಂದ ಲೆಕ್ಕ ತೆಗೆದುಕೊಂಡು ವಾರ್ಷಿಕ ಪುಣ್ಯಸ್ಮರಣೆ ಮಾಡುವಂತೆ ಜ್ಯೋತಿಷಿ ಹೇಳಿದ್ದರು. ಆದ್ದರಿಂದ ನಾನು ಫೆ.16 ರಂದು ಪುಣ್ಯ ಸ್ಮರಣೆ ಆಚರಿಸುತ್ತಿದ್ದೇನೆ. ರಾಜ್ಯಾದ್ಯಂತ ನನ್ನ ಕಷ್ಟಕ್ಕೆ ಜನ ಮರುಗಿ ಸಹಾಯ ಮಾಡಿದ್ದಾರೆ. ಅದಕ್ಕೆ ನಾನು ಋಣಿಯಾಗಿದ್ದೇನೆ. ಶಾಸಕ ಡಿ.ಸಿ. ತಮ್ಮಣ್ಣ ಅವರು ಸ್ಮಾರಕ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ತಮ್ಮಣ್ಣನವರು ಸಹ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅವರು ಮಾಡಿಸಿಕೊಡುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದರು.

ಸಮಾಧಿಯ ಬಳಿ ಆಕ್ರಂದನ
ಯೋಧ ಎಚ್.ಗುರು ಅವರ ಸಮಾಧಿಯ ಬಳಿ ಪತ್ನಿ ಕಲಾವತಿ ಅವರು ಪೂಜೆ ಮಾಡುವ ಸಂದರ್ಭ ಬಿಕ್ಕಿಬಿಕ್ಕಿ ಅತ್ತು ಅಸ್ವಸ್ಥಗೊಂಡರು. ಅವರ ಬಂಧುಗಳು ಕುಡಿಯಲು ನೀರು ಕೊಟ್ಟು ಸಂತೈಸಿ, ಧೈರ್ಯ ತುಂಬಿದರು. ತದ ನಂತರ ಸಮಾಧಿಗೆ ಗಂಧದ ಕಡ್ಡಿ ಕರ್ಪೂರ ಹಚ್ಚಿ ಕೈ ಮುಗಿದು ಸಾಷ್ಟಾಂಗ ನಮಸ್ಕಾರ ಮಾಡಿದರು.

ಯೋಧನ ಸಮಾಧಿಯನ್ನು ಬಗೆಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಸಮಾದೀಯ ಮೇಲೆ ಹೂಗಳಿಂದಲೇ 'ವೀರಯೋಧ ಗುರು ಹೊನ್ನಯ್ಯ' ಎಂದು ಬರೆಯಲಾಗಿತ್ತು. ಕಲಾವತಿ ಅವರ ತಂದೆ ಶಿವಣ್ಣ, ತಾಯಿ ಜಯಮ್ಮ, ಸಹೋದರ ಅರವಿಂದ ಸೇರಿದಂತೆ  ಕುಟುಂಬ ವರ್ಗ, ಸ್ನೇಹಿತರು ಪಾಲ್ಗೊಂಡಿದ್ದರು. ಸಾರ್ವಜನಿಕರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News