ಬೆಳಗಾವಿ: ಟ್ರ್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ

Update: 2020-02-16 17:52 GMT

ಬೆಳಗಾವಿ, ಫೆ.16: ಟ್ರ್ಯಾಕ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದ ಖಾನಾಪುರ ತಾಲೂಕಿನ ಬೋಗೂರ ಗ್ರಾಮದ ಆರು ಜನರ ಕುಟುಂಬದವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ರವಿವಾರ ಬೋಗೂರ ಗ್ರಾಮದ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸರಕಾರದ ವತಿಯಿಂದ ತಲಾ ಐದು ಲಕ್ಷ ರೂ.ಗಳ ಪರಿಹಾರಧನವನ್ನು ವಿತರಿಸಿದರು.

ಖಾನಾಪುರ ತಾಲೂಕಿನ ಬೋಗೂರ ಗ್ರಾಮದ ಬಳಿಯ ತಟ್ಟಿಹಳ್ಳ ಸೇತುವೆ ಮೇಲೆ ಫೆ.8ರಂದು ಸಂಭವಿಸಿದ್ದ ಟ್ರ್ಯಾಕ್ಟರ್ ಅಪಘಾತದಲ್ಲಿ ಆರು ಜನರು ಮೃತಪಟ್ಟು, 18 ಜನರು ಗಾಯಗೊಂಡಿದ್ದರು. ಅಪಘಾತದಲ್ಲಿ ಮೃತಪಟ್ಟಿರುವ ಅಶೋಕ ಫಕ್ಕೀರಪ್ಪ ಕೇದಾರಿ, ಶಾಂತವ್ವ ಹನಮಂತ ಅಳಗೋಡಿ, ಸಾವಿತ್ರಿ ಹುಣಶೀಕಟ್ಟಿ, ನಾಗವ್ವ ಮಾಟೊಳ್ಳೆ, ಚಂದ್ರಮ್ಮ ಹುಣಶೀಕಟ್ಟಿ ಹಾಗೂ ಶಾಂತವ್ವ ಜುಂಜೂರಿ ಅವರ ಕುಟುಂಬದ ಸದಸ್ಯರಿಗೆ ಐದು ಲಕ್ಷ ರೂ.ಗಳ ಪರಿಹಾರಧನದ ಚೆಕ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ವಿತರಿಸಿದರು.

ಹೊಸ ಸೇತುವೆ ನಿರ್ಮಾಣದ ಭರವಸೆ: ಬೋಗೂರ ಗ್ರಾಮದ ತಟ್ಟಿಹಳ್ಳಕ್ಕೆ 49 ವರ್ಷಗಳ ಹಿಂದೆ ನಿರ್ಮಿಸಲಾದ ಹಳೆಯ ಬಾಂದಾರ ಮತ್ತು ಸೇತುವೆಯನ್ನು ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣಕ್ಕೆ 4 ಕೋಟಿ ರೂ.ಅಂದಾಜು ವೆಚ್ವದ ಯೋಜನೆ ಸಿದ್ಧಪಡಿಸಲಾಗಿದೆ. ಲೋಕೋಪಯೋಗಿ ಇಲಾಖೆ ಮತ್ತು ನೀರಾವರಿ ಇಲಾಖೆಯ ಸಚಿವರ ಜತೆ ಚರ್ಚಿಸಿ ಆದಷ್ಟು ಬೇಗನೇ ಹೊಸ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಕೂಲಿಗೆ ತೆರಳುತ್ತಿರುವವರು ಸಾವನ್ನಪ್ಪಿದ್ದು, ದುಃಖಕರ ಸಂಗತಿ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಅದೇ ದಿನ ಸೂಚನೆ ನೀಡಲಾಗಿತ್ತು. ಅದೇ ಪ್ರಕಾರ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಎಲ್ಲರೂ ಕೂಲಿಕಾರ ಕುಟುಂಬದವರಾಗಿರುವುದರಿಂದ ಎಲ್ಲ ಕುಟುಂಬಕ್ಕೂ ಐದು ಲಕ್ಷ ರೂ.ಪರಿಹಾರ ನೀಡಲು ಮುಖ್ಯಮಂತ್ರಿಗೆ ಮನವಿ ಮಾಡಿದಾಗ ಅವರು ತಕ್ಷಣವೇ ಪರಿಹಾರ ನೀಡಿದ್ದಾರೆ. ವಾಹನ ಸವಾರರು ಜಾಗೃತಿ ವಹಿಸಿದರೆ ಅಪಘಾತಗಳನ್ನು ತಪ್ಪಿಸಲು ಸಾಧ್ಯ. ಆದುದರಿಂದ, ಚಾಲಕರು ಮತ್ತು ಮಾಲಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಅಪಘಾತ ಸಂದರ್ಭದಲ್ಲಿ ನಾಲ್ವರು ಸ್ಥಳದಲ್ಲಿ ಸಾವನ್ನಪ್ಪಿದರೆ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು. 18 ಜನ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಮುಖ್ಯಮಂತ್ರಿ ಮೃತರ ಪ್ರತಿ ಕುಟುಂಬಕ್ಕೂ ಐದು ಲಕ್ಷ ರೂ.ಪರಿಹಾರ ಪ್ರಕಟಿಸಿದ್ದಾರೆ ಎಂದರು.

ಆಸ್ಪತ್ರೆಯಲ್ಲಿ ಇರುವ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಕೂಡ ಶೀಘ್ರ ಗುಣಮುಖರಾಗಲಿದ್ದಾರೆ ಎಂದು ಅವರು ತಿಳಿಸಿದರು. ಇದೇ ವೇಳೆ ಹಲಗೇಕರ ಸಂಸ್ಥೆಯ ವತಿಯಿಂದ ಪ್ರತಿ ಕುಟುಂಬಕ್ಕೂ ತಲಾ ಹತ್ತು ಸಾವಿರ ರೂ. ನೆರವು ನೀಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News