ಮಂತ್ರಿಯಾದ ಮಾತ್ರಕ್ಕೆ ಪ್ರಕರಣ ಮುಚ್ಚಿಹಾಕಲು ಸಾಧ್ಯವಿಲ್ಲ: ಸಚಿವ ಎಸ್.ಟಿ.ಸೋಮಶೇಖರ್

Update: 2020-02-16 18:24 GMT

ಮೈಸೂರು, ಫೆ.16: ಸಚಿವ ಆನಂದ್ ಸಿಂಗ್ ಅವರ ಖಾತೆ ಕುರಿತು ಉದ್ಭವಿಸಿರುವ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ಇದ್ದು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ. ಮಂತ್ರಿಯಾದ ಮಾತ್ರಕ್ಕೆ ಪ್ರಕರಣವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರವಿವಾರ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿರುವುದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಸಿಎಂಗೆ ಮಾಹಿತಿ ಇದೆ. ಮುಂದೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದರು.

ಅರಣ್ಯ ಖಾತೆ ಕೊಟ್ಟು ಆನಂದ್ ಸಿಂಗ್ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಂತ್ರಿಯಾದ ಮಾತ್ರಕ್ಕೆ ಪ್ರಕರಣವನ್ನೂ ಮುಚ್ಚಿ ಹಾಕಲು ಸಾಧ್ಯವಿಲ್ಲ. ಮಂತ್ರಿಗಳು ಹೇಳಿದ ಮಾತನ್ನೆಲ್ಲಾ ಅಧಿಕಾರಿಗಳು ಕೇಳಬೇಕು ಎಂದಿಲ್ಲ. ಅಧಿಕಾರಿಗಳೂ ಸಾವಿರ ಬಾರಿ ಯೋಚಿಸಬೇಕಾಗುತ್ತದೆ. ಮಂತ್ರಿಗಳು ಹೇಳಿದರು ಎಂದು ಕಾನೂನು ಬಾಹಿರವಾಗಿ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಿಲ್ಲ. ಮುಂದೆ ಅವರ ಕೆಲಸಕ್ಕೂ ತೊಂದರೆ ಆಗಬಹುದು ಎಂದು ಹೇಳಿದರು.

ಕಂದಾಯ ಸಚಿವ ಆರ್.ಅಶೋಕ್ ಪುತ್ರನ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಎಸ್.ಟಿ.ಸೋಮಶೇಖರ್, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅಶೋಕ್ ನೀಡಿರುವ ಹೇಳಿಕೆ ಮಾತ್ರ ಗಮನಿಸಿದ್ದೇನೆ ಅಷ್ಟೇ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News