ಗಾಂಧೀಜಿ ದೇಸಿ ನಾಗರೀಕತೆಯನ್ನು ಮೈಗೂಡಿಸಿಕೊಂಡಿದ್ದರು: ಲಕ್ಷೀಶ ತೋಳ್ಪಾಡಿ

Update: 2020-02-16 18:27 GMT

ಮೈಸೂರು,ಫೆ.16: ಮಹಾತ್ಮ ಗಾಂಧೀಜಿ ದೇಸಿ ಸಂಸ್ಕೃತಿ ಮತ್ತು ನಾಗರೀಕತೆಯನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡಿದ್ದರು ಎಂದು ವಿದ್ವಾಂಸ ಲಕ್ಷೀಶ ತೋಳ್ಪಾಡಿ ಅಭಿಪ್ರಾಯಿಸಿದರು.

ರಂಗಾಯಣದ ಕಿರುರಂಗ ಮಂದಿರದ ಆವರಣದಲ್ಲಿ ನಡೆಯುತ್ತಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಆಯೋಜಿಸಿದ್ದ 'ಗಾಂಧಿ ಪಥ' ವಿಚಾರ ಸಂಕಿರಣವನ್ನು ರವಿವಾರ ಕವಿ ಸಿದ್ದಲಿಂಗಯ್ಯ ಅವರ ಅನುಪಸ್ಥಿತಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ನಾಗರಿಕತೆಯನ್ನು ನಿರ್ಭೀತಿಯಿಂದ ವಿಮರ್ಶೆಗೊಳಪಡಿಸಿ ದೇಸಿ ನೆಲಗಟ್ಟಿನಲ್ಲಿ ಚಿಂತಿಸಿದ ಮೊದಲ ವ್ಯಕ್ತಿತ್ವೆಂದರೆ ಅದು ಮಹಾತ್ಮ ಗಾಂಧೀಜಿ. ಪ್ರತಿ ಸವಲತ್ತನ್ನೂ ನಾಗರಿಕತೆಯಿಂದ ಪಡೆದು ಅದನ್ನು ಪ್ರಶ್ನಿಸದಿರುವ ಮನೋಭಾವಕ್ಕೆ ವಿರುದ್ಧವಾಗಿ ದೇಸಿ ನೆಲಗಟ್ಟಿನಲ್ಲಿ ಎಲ್ಲವನ್ನೂ ತಾವೇ ಸಿದ್ಧಪಡಿಸಿಕೊಂಡು ಸತ್ಯ ಶೋಧನೆಗೆ ಇಳಿದರು ಎಂದು ಹೇಳಿದರು.

ಗಾಂಧಿ ಮಾಡಿದ ಮೊದಲ ಕೆಲಸ ತಮ್ಮ ಬಗ್ಗೆ ತಾವೇ ವಿರುದ್ಧವಾಗಿ ಯೋಚಿಸುವುದು. ನಾಗರಿಕತೆಗೆ ವಶವಾಗದೆ, ಪರಿಶೋಧನೆಗೆ ತೊಡಗಿಕೊಳ್ಳುವ ಕಾಯಕದಲ್ಲಿ ತೊಡಗಿದರು. ಭಕ್ತಿ, ಅಭಿಮಾನಗಳನ್ನು ಅಗ್ನಿ ಪರೀಕ್ಷೆಗೆ ಒಳಪಡಿಸಿದಾಗ ಮೌಲ್ಯಗಳಾಗುತ್ತವೆ. ಈಗ ಯಾರೆಲ್ಲ ಭಕ್ತಿಯಿಂದ ತೇಲಾಡುತ್ತಿದ್ದಾರೋ ಅವರೆಲ್ಲರೂ ಅಗ್ನಿ ಪರೀಕ್ಷೆಗೆ ಒಳಗಾಗಲೇಬೇಕು ಎಂದರು.

ತನಗೆ ನೋವು ಕೊಟ್ಟ ವ್ಯಕ್ತಿಯ ನೋವನ್ನೂ ಅರಿತು ಅವರಿಗೆ ಪ್ರೀತಿ ತುಂಬಿದ ಕೆಲಸ ಗಾಂಧಿಯಿಂದಾಯಿತು. ಮಹಾಭಾರತದಲ್ಲಿ ಕರ್ಣ ಸಾರಥಿಯಾದ ಶಲ್ಯನ ಮಾತು ಕೇಳಿ ಅರ್ಜುನನ ಕೊರಳ ಬದಲು ಹೃದಯಕ್ಕೆ ಗುರಿಯಿಟ್ಟಂತೆ ಗಾಂಧಿ ತಮ್ಮ ಶತ್ರುಗಳ ಕೊರಳಿನ ಬದಲು ಹೃದಯಕ್ಕೆ ಹತ್ತಿರವಾಗಲು ಯತ್ನಿಸಿದರು. ವೈಷ್ಣವ ಜನತೋ ಅಂದರೆ ಇದೇ ಅಲ್ಲವೇ? ಸಾಮಾಜಿಕ ಪ್ರಜ್ಞೆಯುಳ್ಳವರು ಗಾಂಧಿ- ಅಂಬೇಡ್ಕರ್, ಗಾಂಧಿ- ನೆಹರು, ಗಾಂಧಿ- ಟ್ಯಾಗೋರ್ ರ ಚರ್ಚೆಗಳನ್ನು ಓದಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್ ಮುಖ್ಯ ಭಾಷಣ ಮಾಡಿದರು. ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತೆ ಪ್ರೀತಿ ನಾಗರಾಜ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News