ದ.ಕ.ಜಿಲ್ಲೆಗೆ ಪ್ರಥಮ ಸ್ಥಾನ ತರಲು ಶಿಕ್ಷಕರಿಂದ ವಿನೂತನ ಪ್ರಯೋಗ!

Update: 2020-02-17 04:50 GMT

ಮಂಗಳೂರು, ಫೆ.16: ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದುವುದರೊಂದಿಗೆ ಶೇಕಡಾವಾರು ಫಲಿತಾಂಶದಲ್ಲಿ ಶಾಲೆ, ವಲಯ ಮತ್ತು ಜಿಲ್ಲಾ ಮಟ್ಟಕ್ಕೂ ಅಗ್ರಸ್ಥಾನ ತಂದುಕೊಡಲು ವಿದ್ಯಾರ್ಥಿಗಳು ವೈಯಕ್ತಿಕವಾಗಿ ಶ್ರಮ ಪಡುತ್ತಿರುವುದು ಸಾಮಾನ್ಯ. ಈ ಮಧ್ಯೆ ವಿದ್ಯಾರ್ಥಿಗಳೊಂದಿಗೆ ಶಿಕ್ಷಕ ವರ್ಗ ಕೂಡ ಉತ್ತಮ ಫಲಿತಾಂಶ ದಾಖಲಿಸಲು ವಿಶೇಷ ಸಿದ್ಧತೆಯೊಂದಿಗೆ ಹರಸಾಹಸ ಪಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಮಕ್ಕಳು ಶೂನ್ಯ ಸಾಧನೆ ದಾಖಲಿಸಿದರೆ ಅದರ ನೇರ ಹೊಣೆಯನ್ನು ತಾವೇ ಹೊರಬೇಕಾದ ಕಾರಣ ಬಹುತೇಕ ಶಿಕ್ಷಕರು ಇದೀಗ ವಿದ್ಯಾರ್ಥಿಗಳನ್ನು ಪಳಗಿಸಲು ವಿವಿಧ ರೀತಿಯ ಕಸರತ್ತು ಆರಂಭಿಸಿದ್ದಾರೆ. ಆ ಮೂಲಕ ಶಿಕ್ಷಣ ಇಲಾಖೆಯ ‘ತೂಗುಗತ್ತಿ’ಯಿಂದ ಪಾರಾಗಲು ಪ್ರಯತ್ನಿಸಿದ್ದಾರೆ.

ಎಸೆಸೆಲ್ಸಿ ಪರೀಕ್ಷಾ ಲಿತಾಂಶದಲ್ಲಿ ಈ ಬಾರಿ ದ.ಕ.ಜಿಲ್ಲೆ ಪ್ರಥಮ ಸ್ಥಾನದಲ್ಲಿ ಕಾಣಿಸಿಕೊಳ್ಳಬೇಕು ಎಂದು ಈಗಾಗಲೇ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿಶೇಷ ಸಿದ್ಧತೆ ನಡೆಸಲು ಎಲ್ಲ ಶಾಲೆಗಳಿಗೆ ಸೂಚನೆ ನೀಡಿದೆ. ಅದರಂತೆ ಕಲಿಕೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿಗಳ ಪಟ್ಟಿಮಾಡಿಕೊಂಡು ಮನೆ ಮನೆ ಭೇಟಿ ಮತ್ತು ವಿದ್ಯಾರ್ಥಿಗಳ ದತ್ತು ಸ್ವೀಕಾರ ಪ್ರಕ್ರಿಯೆಗೆ ಶಾಲಾ ಶಿಕ್ಷಕರು ಮುಂದಾಗಿದ್ದಾರೆ.

2015-16ರಲ್ಲಿ ರಾಜ್ಯದಲ್ಲಿ 3ನೇ ಸ್ಥಾನ, 2016-17ನೇ ಸಾಲಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ದ.ಕ.ಜಿಲ್ಲೆಯು 2018-19ನೇ ಸಾಲಿನಲ್ಲಿ ಏಕಾಏಕಿ 7ನೇ ಸ್ಥಾನಕ್ಕೆ ಕುಸಿದಿತ್ತು. ಕಳೆದ ವರ್ಷ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯಿಂದ ಮಾರ್ಗದರ್ಶನ ನೀಡಿ, ಲಿತಾಂಶ ಹೆಚ್ಚಳಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಲಿತಾಂಶದ ಶೇಕಡಾವಾರಿನಲ್ಲಿ ಕುಸಿತಗೊಂಡಿರುವುದು ಇಲಾಖೆಯ ಅಧಿಕಾರಿಗಳನ್ನು ಕಳವಳಕ್ಕೀಡು ಮಾಡಿತ್ತು. ಹಾಗಾಗಿ, ಈ ಬಾರಿ (2019-20) ಮೊದಲ ಸ್ಥಾನವನ್ನು ಬೇರೆ ಜಿಲ್ಲೆಗಳಿಗೆ ಯಾವ ಕಾರಣಕ್ಕೂ ಬಿಟ್ಟುಕೊಡಬಾರದು ಎಂಬ ನಿಟ್ಟಿನಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ಕೆಲವು ಪ್ರಯೋಗಗಳನ್ನು ಅಳವಡಿಸಿದೆ. ಅದರಲ್ಲೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗೆಗೆ ವಿಶೇಷ ಗಮನ ಹರಿಸುವ ಪ್ರಯತ್ನವನ್ನು ಇಲಾಖೆ ಮಾಡುತ್ತಿದೆ.

ವಿದ್ಯಾರ್ಥಿಗಳ ದತ್ತು ಸ್ವೀಕಾರ: ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಕಲಿಕೆ ಗುಣಮಟ್ಟ ಹೆಚ್ಚಿಸಲು ಕೂಡ ಶಿಕ್ಷಣ ಇಲಾಖೆ ಶಾಲೆಗಳಿಗೆ ಸೂಚಿಸಿದೆ. ಅದರಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳನ್ನು ಶಿಕ್ಷಕರಿಗೆ ಸಮಾನವಾಗಿ ಹಂಚಿಕೆ ಮಾಡಿ ಅವರ ಬಗ್ಗೆ ಪರೀಕ್ಷೆ ಮುಗಿಯುವವರೆಗೂ ನಿಗಾ ವಹಿಸುವುದು ಈ ದತ್ತು ಸ್ವೀಕಾರದ ಹಿಂದಿನ ಉದ್ದೇಶವಾಗಿದೆ. ಪ್ರತಿಯೊಬ್ಬ ಶಿಕ್ಷಕ ಕೂಡ ತಾನು ದತ್ತು ಸ್ವೀಕರಿಸಿದ ವಿದ್ಯಾರ್ಥಿಯ ಮನೆಗೆ ಪ್ರತಿದಿನ ಮುಂಜಾನೆ 5 ಗಂಟೆಗೆ ಮತ್ತು ಸಂಜೆ 5, ರಾತ್ರಿ 9:30ಕ್ಕೆ ಕರೆ ಮಾಡಿ ವಿದ್ಯಾರ್ಥಿಯ ಕಲಿಕೆಯ ಬಗ್ಗೆ ಮಾಹಿತಿ ಕಲೆ ಹಾಕಬೇಕಾಗುತ್ತದೆ. ಮನೆಯಲ್ಲಿರುವಾಗ ಮಾತ್ರವಲ್ಲ, ಶಾಲೆಯಲ್ಲೂ ಕೂಡ ಆ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಮುತುವರ್ಜಿ ವಹಿಸಿ ಕಲಿಕೆಗೆ ಪ್ರೋತ್ಸಾಹಿಸಲಾಗುತ್ತದೆ. ಇದೀಗ ಪಾಠಗಳ ಪುನರ್ಮನನ ಆರಂಭವಾಗಿದೆ. ಗುಂಪು ಕಲಿಕೆಗೂ ಶಾಲೆಗಳಲ್ಲಿ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ.

ಮನೆ ಮನೆ ಭೇಟಿ

 ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮನೆ ಭೇಟಿ ಪ್ರತೀ ವರ್ಷವೂ ನಡೆಯುತ್ತದೆ. ಆದರೆ, ಈ ಬಾರಿ ಅದಕ್ಕೆ ವಿಶೇಷ ಒತ್ತು ನೀಡಲಾಗಿದೆ. ಫೆ.27ರಿಂದ ಪೂರ್ವಸಿದ್ಧತಾ ಪರೀಕ್ಷೆ ನಡೆಯಲಿದ್ದು, ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳ ಮನೆಗೆ ಶಿಕ್ಷಕರೊಂದಿಗೆ ಎಸ್‌ಡಿಎಂಸಿ ಪದಾಧಿಕಾರಿಗಳು ಮತ್ತು ಊರಿನ ಮುಖಂಡರೂ ತೆರಳಿ ಕಲಿಕೆಗೆ ಪ್ರೋತ್ಸಾಹ ನೀಡಲು ಅರಂಭಿಸಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಹೆತ್ತವರೊಂದಿಗೆ ಮಾತುಕತೆ ನಡೆಸಿ ಓದಿನ ಕಡೆಗೆ ಹೆಚ್ಚಿ ನ ಗಮನ ಹರಿಸಲು ಕೇಳಿಕೊಳ್ಳಲಾಗುತ್ತಿದೆ. ಅಲ್ಲದೆ, ಟಿವಿ, ಮೊಬೈಲ್ ಮತ್ತಿತರ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳು ಮಕ್ಕಳ ಕೈಗೆ ಸಿಗದಂತೆ ಮತ್ತು ಮುಂಜಾನೆ ಬೇಗ ಎದ್ದು ಓದುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಪೋಷಕರೊಂದಿಗೆ ವಿಚಾರ ವಿನಿಮಯ ನಡೆಸುವುದು ಈ ಮನೆ ಭೇಟಿಯ ಉದ್ದೇಶವಾಗಿದೆ.

30,605 ವಿದ್ಯಾರ್ಥಿಗಳು

ಈ ಬಾರಿ ಮಾ.27ರಿಂದ ಎ.9ರವರೆಗೆ ನಡೆಯುವ ಎಸೆಸೆಲ್ಸಿ ಪರೀಕ್ಷೆಯಲ್ಲಿ ದ.ಕ.ಜಿಲ್ಲೆಯ 511 ಪ್ರೌಢಶಾಲೆಗಳ 30,605 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಆ ಪೈಕಿ 16,140 ಮಂದಿ ಬಾಲಕರು, 14,465 ಮಂದಿ ಬಾಲಕಿಯರಿದ್ದಾರೆ.

ಎಸೆಸೆಲ್ಸಿ ಪರೀಕ್ಷೆಯಲ್ಲಿ ದ.ಕ.ಜಿಲ್ಲೆಯು ಪ್ರಥಮ ಸ್ಥಾನ ಕಾಯ್ದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ವಿಶೇಷ ಪ್ರಯೋಗ ಮತ್ತು ಸಿದ್ಧತೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳನ್ನು ಶಿಕ್ಷಕರು ದತ್ತು ತೆಗೆದುಕೊಂಡು ಕಲಿಸಲು ಆರಂಭಿಸಿದ್ದಾರೆ. ಮನೆ ಭೇಟಿ, ಪಠ್ಯಗಳ ಮರುಓದು ಸಹಿತ ಪರೀಕ್ಷೆಯನ್ನು ನಿರಾತಂಕವಾಗಿ ಎದುರಿಸಲು ಬೇಕಾದ ಎಲ್ಲ ರೀತಿಯ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

-ಮಲ್ಲೇಸ್ವಾಮಿ ಡಿಡಿಪಿಐ,

ದ.ಕ.ಜಿಲ್ಲೆ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News