×
Ad

‘ಪಾಕ್ ಪರ ಘೋಷಣೆ’ ಕೂಗಿದ ಆರೋಪಿ ವಿದ್ಯಾರ್ಥಿಗಳ ಮೇಲೆ ಕೋರ್ಟ್ ಆವರಣದಲ್ಲಿ ಹಲ್ಲೆ

Update: 2020-02-17 12:22 IST

ಹುಬ್ಬಳ್ಳಿ, ಫೆ.17: ‘ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗಿದ ಆರೋಪದಲ್ಲಿ ಬಂಧಿತ ಇಲ್ಲಿನ ಗೋಕುಲ ರಸ್ತೆಯಲ್ಲಿನ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳ ಮೇಲೆ ಸೋಮವಾರ ನ್ಯಾಯಾಲಯದ ಆವರಣದಲ್ಲೇ ಹಲ್ಲೆ ನಡೆದಿದೆ.

ಪಾಕ್ ಪರ ಘೋಷಣೆ ಕೂಗಿದ ಆರೋಪದಲ್ಲಿ ಕಾಶ್ಮೀರ ಮೂಲದ ಅಮೀರ್, ಬಾಸಿತ್ ಹಾಗೂ ತಾಲೀಬ್ ಎಂಬವರ ಈ ಹಲ್ಲೆ ನಡೆದಿದೆ. ಶನಿವಾರ ಪೊಲೀಸರು ಇವರನ್ನು ಬಂಧಿಸಿದ್ದರೂ ಬಳಿಕ ಬಿಡುಗಡೆಗೊಳಿಸಿದ್ದರು. ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರು ನಿನ್ನೆ ಮತ್ತೆ ಬಂಧಿಸಿದ್ದರು. ಇಂದು ಬೆಳಗ್ಗೆ ಅವರನ್ನು ಹುಬ್ಬಳ್ಳಿಯ 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಈ ಸಂದರ್ಭ ನ್ಯಾಯಾಲಯವು ಆರೋಪಿಗಳಿಗೆ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತು. ಅದರಂತೆ ಆರೋಪಿಗಳನ್ನು ಪೊಲೀಸರು ಕರೆದೊಯ್ಯುತ್ತಿದ್ದ ವೇಳೆ ಅಲ್ಲಿ ಸೇರಿದ್ದ ಗುಂಪು ನ್ಯಾಯಾಲಯದ ಆವರಣದಲ್ಲೇ ಅವರ ಮೇಲೆ ಹಲ್ಲೆಗೆ ಮುಂದಾಯಿತು. ಈ ವೇಳೆ ಆರೋಪಿಗಳ ಮೇಲೆ ಚಪ್ಪಲಿ ತೂರಾಟ ನಡೆಸಿದ್ದಲ್ಲದೆ, ಹಲ್ಲೆ ಕೂಡಾ ನಡೆಸಿರುವುದು ವರದಿಯಾಗಿದೆ. ಬಳಿಕ ಪೊಲೀಸರು ಅವರನ್ನು ಎಳೆದೊಯ್ದು ಪೊಲೀಸ್ ಜೀಪಿನಲ್ಲಿ ಕರೆದೊಯ್ದರು.

ಪುಲ್ವಾಮ ದಾಳಿ ಸಂಭವಿಸಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳು ತಮ್ಮ ಕೊಠಡಿಯಲ್ಲಿ ವೀಡಿಯೊವೊಂದನ್ನು ಮಾಡಿಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಆರೋಪ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News