ಕಾಂಗ್ರೆಸ್ ನಲ್ಲಿದ್ದಾಗ ಸುಮ್ಮನಿದ್ದವರು, ಬಿಜೆಪಿ ಸೇರಿದಾಗ ವಿರೋಧಿಸುವುದೇಕೆ: ಆನಂದ್‌ ಸಿಂಗ್ ಪ್ರಶ್ನೆ

Update: 2020-02-17 12:18 GMT

ಬೆಂಗಳೂರು, ಫೆ.17: ಬಿಜೆಪಿಯಿಂದ ನಾನು ಸಚಿವನಾಗಿರುವಾಗ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ನಾಯಕರು, ಈ ಹಿಂದೆ ಕಾಂಗ್ರೆಸ್‌ಗೆ ಸೇರಿದಾಗ ಯಾಕೆ ವಿರೋಧಿಸಿಲ್ಲವೆಂದು ಅರಣ್ಯ ಸಚಿವ ಆನಂದ್‌ ಸಿಂಗ್ ತಿರುಗೇಟು ನೀಡಿದ್ದಾರೆ. 

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಸೇರಿದ ಸಂದರ್ಭದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ನನ್ನ ಮೇಲಿದ್ದ ಪ್ರಕರಣಗಳೇ ಈಗಲೂ ಮುಂದುವರೆದಿದೆ. ಆಗ ಸುಮ್ಮನಿದ್ದವರು, ಬಿಜೆಪಿಯಿಂದ ಸಚಿವನಾದ ಕೂಡಲೇ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲವೆಂದು ತಿಳಿಸಿದರು.

ನನ್ನ ಮೇಲಿರುವ ಎಲ್ಲ ಪ್ರಕರಣಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನಾನು ಸಚಿವನಾದ ತಕ್ಷಣ ಎಲ್ಲ ಸಾಕ್ಷಾಧಾರಗಳನ್ನು ನಾಶ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯ ಯಾವ ತೀರ್ಪು ನೀಡುತ್ತದೆಯೊ, ಅದನ್ನು ಎದುರಿಸಲು ಸಿದ್ಧನಿದ್ದೇನೆ. ವಿನಾಕಾರಣ ನನ್ನ ವಿರುದ್ಧ ಆರೋಪ ಮಾಡುವುದು ಸರಿಯಲ್ಲವೆಂದು ಅವರು ಮನವಿ ಮಾಡಿದರು.

ತಮಿಳುನಾಡಿನಲ್ಲಿ ಇದೇ ರೀತಿಯ ಪ್ರಕರಣಗಳು ನಡೆದಿದ್ದು, ಅಲ್ಲಿನ ಪೊಲೀಸರು ಹಾಗೂ ತನಿಖಾ ಅಧಿಕಾರಿಗಳು ಯಾರೊಬ್ಬರನ್ನು ವಶಕ್ಕೆ ಪಡೆದಿಲ್ಲ. ಹಾಗೂ ನನ್ನ ಚುನಾವಣಿಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ನನ್ನ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಪ್ರಕಟಿಸಿದ್ದೇನೆ. ಅಂತಿಮವಾಗಿ ನ್ಯಾಯಾಲಯದಿಂದ ಯಾವ ತೀರ್ಪು ಬರುತ್ತದೆಯೋ, ಅದನ್ನು ಒಪ್ಪಿಕೊಳ್ಳಲು ಸಿದ್ಧನಿದ್ದೇನೆಂದು ಅವರು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News