ಪಾಕ್‌ ಪರ ಘೋಷಣೆ ಕೂಗಿದ ಆರೋಪ: ಪೊಲೀಸ್ ತನಿಖೆ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯೆ

Update: 2020-02-17 12:43 GMT

ಬೆಂಗಳೂರು, ಫೆ.17: ಹುಬ್ಬಳ್ಳಿಯ ಕೆಎಲ್ಇ ಶಿಕ್ಷಣ ಸಂಸ್ಥೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್‌ ಪರ ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳನ್ನು ಹೇಳಿಕೆ ಆಧಾರದ ಮೇಲೆ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪೊಲೀಸರು ಬಿಡುಗಡೆ ಮಾಡಿದ್ದರು. ಈ ಬಿಡುಗಡೆಯ ಬಗ್ಗೆ ಸಂಪೂರ್ಣವಾಗಿ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ, ವಲಯ ಐಜಿಪಿ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೂ ಸೂಚಿಸಿದ್ದೇನೆಂದು ತಿಳಿಸಿದರು.

ಪುನಃ ಬಂಧನ: ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಪುನಃ ಬಂಧಿಸಲಾಗಿದ್ದು, ನ್ಯಾಯಾಂಗದ ಮುಂದೆ ಹಾಜರು ಪಡಿಸಲಾಗಿದೆ. ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಈ ಪ್ರಕರಣದಲ್ಲಿ ಸರಕಾರ ಎಲ್ಲಿಯೂ ಎಡವಿಲ್ಲವೆಂದು ಅವರು ಸ್ಪಷ್ಟಪಡಿಸಿದರು.

ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಕಾಂಗ್ರೆಸ್ ನಾಯಕರು ಬೀದಿಯಲ್ಲಿ ನಿಂತು ಬಾಯಿಬಡಿದುಕೊಳ್ಳುತ್ತಾರೆ. ವಿದ್ಯಾರ್ಥಿಗಳ ಹೇಳಿಕೆ ಆಧರಿಸಿ ಬಿಡುಗಡೆ ಮಾಡಿದರೆ ಅದಕ್ಕೂ ಕೊಂಕು ನುಡಿಯುತ್ತಾರೆ. ಇಂತಹ ದ್ವಂದ್ವ ನಿಲುವನ್ನು ಮೊದಲು ಸರಿಪಡಿಸಿಕೊಳ್ಳಲಿ ಎಂದು ಅವರು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News