ರಾಜ್ಯದಲ್ಲಿ ಮತ್ತೊಂದು 'ಶಾಹೀನ್ ಬಾಗ್': ಸಿಎಎ ವಿರೋಧಿಸಿ ಮಹಿಳೆಯರ ಪ್ರತಿಭಟನೆ 8ನೇ ದಿನಕ್ಕೆ

Update: 2020-02-17 13:09 GMT

ಕಲಬುರಗಿ, ಫೆ.17: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ನಗರದ ರಿಂಗ್ ರೋಡ್ ಹತ್ತಿರದ ಶಹದಾಬ್ ಫಂಕ್ಷನ್ ಹಾಲ್ ಬಳಿ ಜಾಯಿಂಟ್ ಆಕ್ಷನ್ ಕಮಿಟಿಯ ನೇತೃತ್ವದಲ್ಲಿ ನೂರಾರು ಮಹಿಳೆಯರು ಕಳೆದ 8 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಇಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಾಯಿಂಟ್ ಆಕ್ಷನ್ ಕಮಿಟಿ ಸಹ-ಸಂಚಾಲಕ ಅಲಿಮ್ ಅಹಮ್ಮದ್, 'ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ಈ ಕಾಯ್ದೆಯು ಸಂವಿಧಾನ ವಿರೋಧಿ ಕ್ರಮವಾಗಿದೆ. ಎಲ್ಲರೂ ತಮ್ಮ ದಾಖಲೆಗಳನ್ನು ಕೊಡಬೇಕಾಗುತ್ತದೆ. ಆದರೆ ದೇಶದಲ್ಲಿ 48 ಕೋಟಿ ಭೂ ರಹಿತರಿದ್ದಾರೆ, 10 ಕೋಟಿ ಬುಡಕಟ್ಟು ಜನರು, 6 ಕೋಟಿ ಅಲೆಮಾರಿ ಜನರು ಹಾಗೂ 45 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಇವರೆಲ್ಲ ಸೇರಿ ಶೇ.70 ರಷ್ಟಿದ್ದು ಇವರ ಬಳಿ ಸರಕಾರ ನಿಗದಿಪಡಿಸಿರುವ ಯಾವುದೇ ದಾಖಲೆಗಳು ಸಿಗುವುದು ಕಷ್ಟ. ಎನ್‌ಪಿಆರ್ ನಲ್ಲಿ ತಂದೆ ತಾಯಿಯ ವಾಸ ಸ್ಥಳ ಯಾವುದು, ಜನ್ಮ ದಿನಾಂಕ ಯಾವುದು ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಅನಕ್ಷರಸ್ಥ ತಂದೆ-ತಾಯಿಂದಿರು ಎಲ್ಲಿಂದ ಇಂತಹ ದಾಖಲೆಗಳನ್ನು ತರಲು ಸಾಧ್ಯ ಎಂದು ಅತಂಕ ವ್ಯಕ್ತಪಡಿಸಿದರು.

'ಸೂಕ್ತ ದಾಖಲೆಗಳನ್ನು ಹಾಜರು ಪಡಿಸದಿದ್ದಲ್ಲಿ ಅನುಮಾನಸ್ಪದ ನಾಗರಿಕ ಎಂದು ಪರಿಗಣಿಸಿ ಕ್ರಮಕೈಗೊಳ್ಳಬಹುದು. ಬಳಿಕ ಡಿಟೆನ್ಶನ್ ಸೆಂಟರ್ ಗಳೆಂಬ ಮೃತ್ಯು ಕೂಪಗಳಿಗೂ ದೂಡಬಹುದಾಗಿದೆ. ಈ ಕಾಯ್ದೆಯಿಂದ ಕೇವಲ ಮುಸ್ಲಿಮರಿಗೆ ಮಾತ್ರ ತೊಂದರೆಯಾಗುತ್ತದೆ ಎಂಬುದು ಸುಳ್ಳು. ಇದು ಎಲ್ಲಾ ಭಾರತೀಯ ನಾಗರೀಕರ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದಕ್ಕೆ ಅಸ್ಸಾಂನಲ್ಲಿ ಆಗಿರುವ ಅನಾಹುತಗಳೇ ಸಾಕ್ಷಿ. ಜನರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸದ ಸರ್ಕಾರ ಇಂತಹ ಕರಾಳ ಕಾಯ್ದೆಗಳನ್ನು ಯಾವುದೇ ರೀತಿಯ ಚರ್ಚೆ ಮಾಡದೇ ಏಕಪಕ್ಷೀಯವಾಗಿ ದೇಶದ ಜನರ ಮೇಲೆ ಹೇರುವುದು ಅಸಂವಿಧಾನಿಕ ಎಂದು ಟೀಕಿಸಿದರು.

ಜಾಯಿಂಟ್ ಆಕ್ಷನ್ ಕಮಿಟಿಯ ಮತ್ತೊರ್ವ ನಾಯಕ ಯೂಸುಫ್ ಖನಿ ಸಾಹೇಬ್ ಮಾತನಾಡಿ, ದೇಶದ ಎಲ್ಲಾ ನಾಗರಿಕರು ತಮ್ಮ ಹಕ್ಕುಗಳಿಗಾಗಿ ಹಾಗೂ ದಮನಕಾರಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಮಾತ್ರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದ್ದು, ಈ ನಿಟ್ಟಿನಲ್ಲಿ ಕಲಬುರಗಿಯಲ್ಲೂ ಕೂಡಾ ಮಹಿಳೆಯರು ಶಾಹೀನ್ ಬಾಗ್ ರೀತಿಯ ಹೋರಾಟವನ್ನು ಕಳೆದ 8 ದಿನಗಳಿಂದ ಮಾಡುತ್ತಿದ್ದಾರೆ. ಇದು ಮಹಿಳೆಯರ ಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದರು.

ಮೌಲಾನಾ ತನ್ವೀರ್ ಹಾಶ್ಮಿ ಮಾತನಾಡಿ, ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ಕಾನೂನುಗಳ ವಿರುದ್ಧ ದೇಶಾದ್ಯಂತ ಹೋರಾಟದ ಮುಂಚೂಣಿಯಲ್ಲಿ ಮಹಿಳೆಯರು, ವಿದ್ಯಾರ್ಥಿ, ಯುವಜನರು ಕಾಣಿಸುತ್ತಿರುವುದು ನಮ್ಮ ಭವಿಷ್ಯದ ಆಶಾಕಿರಣವಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News