ಪೇಜಾವರ ಶ್ರೀ ಸೇರಿ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ

Update: 2020-02-17 14:47 GMT

ಬೆಂಗಳೂರು, ಫೆ. 17: ಮಾಜಿ ರಾಜ್ಯಪಾಲ ಟಿ.ಎನ್.ಚತುರ್ವೇದಿ, ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ, ಮಾಜಿ ಸಚಿವರಾದ ಡಿ.ಮಂಜುನಾಥ್, ಕೆ.ಅಮರನಾಥ ಶೆಟ್ಟಿ ಸೇರಿದಂತೆ ಅಗಲಿದ ಗಣ್ಯರಿಗೆ ವಿಧಾನ ಮಂಡಲ ಉಭಯ ಸದನಗಳನ್ನು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೋಮವಾರ ವಿಧಾನಸಭೆಯಲ್ಲಿ ಸಂತಾಪ ಸೂಚನೆ ನಿರ್ಣಯ ಮಂಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವೈಜನಾಥ್ ಪಾಟೀಲ್, ಮಲ್ಲಾರಿಗೌಡ ಪಾಟೀಲ್, ನಾರಾಯಣರಾವ್ ಗೋವಿಂದ ತರಳೆ, ಚಂದ್ರಕಾಂತ್ ಸಿಂದೋಲ್, ಎನ್.ವೆಂಕಟಾಚಲ, ಸಾಹಿತಿ ಪ್ರೊ.ಎಲ್.ಎಸ್.ಶೇಷಗಿರಿರಾವ್, ಹೊಸ್ತೋಟ ಮಂಜುನಾಥ ಭಾಗವತ, ಟಿ.ಎನ್.ಶೇಷನ್ ಅವರ ನಿಧನ ಹೊಂದಿರುವುದನ್ನು ಸದನಕ್ಕೆ ತಿಳಿಸಿದರು.

ಪ್ರಮುಖರನ್ನು ಕಳೆದುಕೊಂಡಿದ್ದೇವೆ: ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಪೇಜಾವರ ಶ್ರೀಗಳು ಅತಿ ಹೆಚ್ಚು ಪರ್ಯಾಯ ಪೀಠಾರೋಹಣ ಮಾಡಿದ್ದ ಕೀರ್ತಿ ಹೊಂದಿದ್ದಾರೆ. ಅಲ್ಲದೆ, ಹಿಂದೂ ಧರ್ಮದ ಉತ್ಥಾನ ಮತ್ತು ದಲಿತ-ಶೋಷಿತರ ಏಳ್ಗೆಗಾಗಿ ಶ್ರಮಿಸಿದ್ದಾರೆ. ಶ್ರೀಗಳ ಅಗಲಿಕೆಯಿಂದ ಹಿಂದೂಧರ್ಮದ ಪ್ರಮುಖರೊಬ್ಬರನ್ನು ಕಳೆದುಕೊಂಡಂತೆ ಆಗಿದೆ ಎಂದು ಸ್ಮರಿಸಿದರು.

ವಾಲಿಕಾರ ಹೆಸರು: ಇದೇ ವೇಳೆ ಮಾತು ಮುಂದಿವರಿಸಿದ ಬಿಎಸ್‌ವೈ, ಹಿರಿಯ ಸಾಹಿತಿ ಚನ್ನಣ್ಣ ವಾಲಿಕಾರ, ನವರತ್ನ ಶ್ರೀನಿವಾಸ್, ಕದ್ರಿ ಗೋಪಿನಾಥ್ ಸೇರಿದಂತೆ ಸಂತಾಪ ಸೂಚನೆ ಪ್ರಸ್ತಾವದಲ್ಲಿ ಇಲ್ಲದ ಕೆಲವರ ಹೆಸರನ್ನು ಉಲ್ಲೇಖಿಸಿ ಸಂತಾಪ ಸೂಚಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್, ಮುಖ್ಯಮಂತ್ರಿ ಯಡಿಯೂರಪ್ಪ ಪ್ರಸ್ತಾಪಿಸಿದ ಹೆಸರುಗಳನ್ನು ಸ್ಪೀಕರ್ ತಮ್ಮ ಪ್ರಸ್ತಾವನೆಯಲ್ಲಿ ಸೇರಿಸಿಕೊಳ್ಳಬೇಕು. ಇಲ್ಲವಾದರೆ ಅವರಿಗೆ ಮತ್ತೊಂದು ದಿನ ಸಂತಾಪ ಸೂಚನೆ ಮಂಡಿಸಬೇಕೆಂದು ಸಲಹೆ ಮಾಡಿದರು.

ಟ್ರೇಡ್ ಮಾರ್ಕ್: ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಸರಳ ಮತ್ತು ಸಜ್ಜನ ರಾಜಕಾರಣಿಯಾಗಿದ್ದರು. ಅಲ್ಲದೆ, ಸಹಕಾರ ಧುರೀಣರು ಆಗಿದ್ದರು. ಅವರು ಬಿಳಿ ಶರ್ಟ್ ಮತ್ತು ಲುಂಗಿ ಧರಿಸುತ್ತಿದ್ದು, ತೋಳಿನ ಶರ್ಟನ್ನು ಸದಾ ಮಡಿಚಿಕೊಂಡಿರುತ್ತಿದ್ದುದು ಅವರ ಟ್ರೇಡ್ ಮಾರ್ಕ್ ಆಗಿತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಮರಿಸಿದರು.

ಅಸ್ಪೃಶ್ಯತೆ ನಿವಾರಣೆಗೆ ಪ್ರಯತ್ನ: ‘ವಿಶ್ವೇಶ ತೀರ್ಥ ಸ್ವಾಮೀಜಿ ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅಸ್ಪೃಶ್ಯತೆ ನಿವಾರಣೆಗಾಗಿ ಶ್ರಮಿಸುತ್ತಿದ್ದರು. ದಲಿತರ ಕೇರಿಗಳಿಗೆ ಇತರ ಸಮುದಾಯಗಳ ಸ್ವಾಮಿಗಳೊಂದಿಗೆ, ದಲಿತರೊಂದಿಗೆ ಸಹಭೋಜನದ ಮೂಲಕ ಅಸ್ಪೃಶ್ಯತೆ ನಿವಾರಣೆ ಶ್ರಮಿಸಿದ್ದು ಅವಿಸ್ಮರಣೀಯ ಎಂದು ಡಿಸಿಎಂ ಗೋವಿಂದ ಕಾರಜೋಳ ನೆನಪು ಮಾಡಿಕೊಂಡರು.

ಸ್ಮಾರಕ ನಿರ್ಮಾಣಕ್ಕೆ ಒತ್ತಾಯ: ಪೇಜಾವರ ಶ್ರೀಗಳು ಕೊನೆಯ ದಿನ ಮಾಡಿದ ರಾಮಯಣದ ಕುರಿತ ಪ್ರವಚನವನ್ನು ರಾಜಕಾರಣಿಗಳು ಸೇರಿ ಎಲ್ಲರೂ ಕೇಳಿಸಿಕೊಳ್ಳಬೇಕು. ಅಲ್ಲದೆ, ಅವರ ನೆನಪಿಗಾಗಿ ರಾಜ್ಯ ಸರಕಾರ ಉಡುಪಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಸದಸ್ಯ ರಘುಪತಿ ಭಟ್ ಆಗ್ರಹಿಸಿದರು.

ಆ ಬಳಿಕ ಸದನದಲ್ಲಿ ಮೃತರ ಗೌರವಾರ್ಥ ಎಲ್ಲ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಸಂತಾಪ ಸೂಚನೆ ನಿರ್ಣಯವನ್ನು ಮೃತರ ಕುಟುಂಬಕ್ಕೆ ಕಳುಹಿಸಿಕೊಡಲಾಗುವುದು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿ, ಸದನವನ್ನು ನಾಳೆಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News