ಬಿಎಸ್‌ವೈ ಸರಕಾರಕ್ಕೆ ಧನ್ಯವಾದಗಳು....: 'ಸಾಧನೆ' ಬಗ್ಗೆ ವ್ಯಂಗ್ಯವಾಡಿದ ಸಿದ್ದರಾಮಯ್ಯ ಹೇಳಿದ್ದೇನು ?

Update: 2020-02-17 14:55 GMT

ಬೆಂಗಳೂರು, ಫೆ. 17: ನಮ್ಮ ಐದು ವರ್ಷಗಳ ಸರಕಾರದ ಸಾಧನೆಗಳನ್ನು ರಾಜ್ಯಪಾಲರ ಭಾಷಣದ ಮೂಲಕ ಗುರುತಿಸಿ, ಶ್ಲಾಘಿಸಿದ ಮತ್ತು ತಮ್ಮ 'ಸರಕಾರದ ಸಾಧನೆ'ಯ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪನವರ ಸರಕಾರಕ್ಕೆ ಧನ್ಯವಾದಗಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಸೋಮವಾರ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ‘ಸರಕಾರವು ರಾಜ್ಯಪಾಲರ ಭಾಷಣದ ಮೂಲಕ ಸುಳ್ಳು ಮಾಹಿತಿ ನೀಡಿದೆ. ಪ್ರವಾಹ ಬಂದು 6 ತಿಂಗಳಾಗಿದೆ ಇನ್ನೂ ಕೂಡ ಕೃಷಿಭೂಮಿ ಕೊಚ್ಚಿ ಹೋದವರಿಗೆ, ಅಂಗಡಿ ಮುಂಗಟ್ಟು, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆರೆ ಪೀಡಿತ ಪ್ರದೇಶಗಳಲ್ಲಿನ ಶಾಲಾ ಕೊಠಡಿಗಳ ದುರಸ್ತಿ ಮಾಡಿಲ್ಲ. ಎಷ್ಟೋ ಮಂದಿ ಪ್ರವಾಹ ಸಂತ್ರಸ್ತರು ಈಗಲೂ ಬೀದಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

‘ಪ್ರವಾಹ ಪೀಡಿತ ಪ್ರದೇಶಗಳ ದುಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಲೇ ಇದೆ, ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನ ಮಾತ್ರ ಸರಕಾರ ಉಳಿಸಿಕೊಳ್ಳೋದರ ಮೇಲೆ ಕೇಂದ್ರೀಕೃತವಾಗಿದೆ. ಅನೈತಿಕ ಮಾರ್ಗದ ಮೂಲಕ ಅಧಿಕಾರ ಹಿಡಿದ ಇವರು ಸಹಜವಾಗಿಯೇ ಅಭಿವೃದ್ಧಿಯನ್ನು ಕಡೆಗಣಿಸಿ ಸ್ವಾರ್ಥ ಸಾಧನೆಗೆ ಇಳಿದಿದ್ದಾರೆ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News