ವಿರೋಧಿಗಳ ಆತ್ಮೀಯತೆ, ರಾಜಕೀಯ ವೈರಿಗಳ ಸಮಾಗಮ: ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾದ ವಿಧಾನಸಭೆ

Update: 2020-02-17 15:19 GMT

ಬೆಂಗಳೂರು, ಫೆ. 17: ಸದಾ ಆರೋಪ-ಪ್ರತ್ಯಾರೋಪಗಳ ಮೂಲಕವೇ ರಾಜ್ಯದ ಗಮನ ಸೆಳೆಯುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಸೇರಿ ಹಲವರ ಮುಖಾಮುಖಿಗೆ ವಿಧಾನಸಭೆ ವೇದಿಕೆಯಾಗಿದ್ದು ವಿಶೇಷವಾಗಿತ್ತು.

ಸೋಮವಾರ ವಿಧಾನ ಮಂಡಲ ಉಭಯ ಸದನವನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣದ ಬಳಿಕ ಬಿಡುವಿನ ವೇಳೆಯಲ್ಲಿ ಪಕ್ಷಾಂತರಿಗಳಾಗಿ ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿ ಮೊದಲ ಬಾರಿಗೆ ಸದನದಲ್ಲಿ ಕಾಣಿಸಿಕೊಂಡಿದ್ದಲ್ಲದೆ, ತಮ್ಮ ಹಿಂದಿನ ನಾಯಕರನ್ನು ಭೇಟಿ ಮಾಡಿ ಸಹಕಾರ ನೀಡುವಂತೆ ಕೋರಿದ್ದು ಗಮನ ಸೆಳೆಯಿತು.

ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಕೆ. ಗೋಪಾಲಯ್ಯ, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜ್, ಆನಂದ್‌ಸಿಂಗ್, ಶ್ರೀಮಂತ್ ಪಾಟೀಲ್ ಸೇರಿ ನೂತನ ಸಚಿವರು, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ವಿಪಕ್ಷಗಳ ಮುಂದಿನ ಸಾಲಿನಲ್ಲಿ ಕುಳಿತಿದ್ದ ನಾಯಕರನ್ನು ಭೇಟಿ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡರು.

ಗುರು-ಶಿಷ್ಯರ ಸಮಾಗಮ: ಉಪಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿರುವವರ ಪೈಕಿ 10 ಮಂದಿ ಸಚಿವರಾಗಿದ್ದು, ಮೈತ್ರಿ ಸರಕಾರ ಪತನದ ವೇಳೆ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಅಂದಿನ ಸಿಎಂ ಕುಮಾರಸ್ವಾಮಿ ಸೇರಿದಂತೆ ಪಕ್ಷಾಂತರಿಗಳನ್ನು ಟೀಕಿಸಿದ್ದರು. ಬದಲಾದ ಕಾಲಘಟ್ಟದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿದ ಆರೇಳು ತಿಂಗಳ ಸುದೀರ್ಘ ಅವಧಿಯ ನಂತರ ಸದನದಲ್ಲಿ ಗುರು-ಶಿಷ್ಯರು ಏನೂ ನಡೆದೇ ಇಲ್ಲವೆಂಬಂತೆ ಔಪಚಾರಿಕವಾಗಿ ಪರಸ್ಪರ ಆತ್ಮೀಯ ಸ್ನೇಹಿತರಂತೆ ಮಾತುಕತೆ ನಡೆಸಿದರು.

ಆತ್ಮೀಯತೆ: ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್, ಸಚಿವರಾದ ಬಿ.ಸಿ.ಪಾಟೀಲ್, ಬೈರತಿ ಬಸವರಾಜು ಸಿದ್ದರಾಮಯ್ಯರ ಜತೆಗೆ ಬಹಳ ಹೊತ್ತು ಆತ್ಮೀಯತೆಯಿಂದ ಮಾತನಾಡುತ್ತಾ ಸಮಯ ಕಳೆದರು.

ಈ ನಡುವೆ ಆಡಳಿತ ಪಕ್ಷದ ಸಾಲಿನಿಂದ ಎದ್ದು ಬಂದ ಸಿಎಂ ಯಡಿಯೂರಪ್ಪ, ಜೆಡಿಎಸ್ ನಾಯಕ ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಬಳಿ ತೆರಳಿ ಮಾತುಕತೆ ನಡೆಸಿದರು. ಇದೇ ವೇಳೆ ಬಿಎಸ್‌ವೈ, ವಿಪಕ್ಷ ಸಿದ್ದರಾಮಯ್ಯರ ಕೈಕುಲುಕಿ ಗಮನ ಸೆಳೆದರು.

ವಿಜಯನಗರ ಜಿಲ್ಲೆ ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದ ಆನಂದ್ ಸಿಂಗ್ ಹಾಗೂ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಸೋಮಶೇಖರ್ ರೆಡ್ಡಿ ಕೆಲಹೊತ್ತು ಒಟ್ಟಿಗೆ ಕೂತು ಪರಸ್ಪರ ಚರ್ಚಿಸಿದ್ದು ಕಂಡುಬಂತು. ಕೃಷಿ ಸಚಿವ ಬಿ.ಸಿ.ಪಾಟೀಲ್ ಹಸಿರು ಶಾಲು ಹೊದ್ದು ಸದನಕ್ಕೆ ಬಂದಿದ್ದರು.

ಮತ್ತೊಂದೆಡೆ ಹಿರಿಯ ಸದಸ್ಯರಾದ ರಮೇಶ್‌ ಕುಮಾರ್, ಐವಾನ್ ಡಿಸೋಜಾ, ಕೆ.ಗೋಪಾಲಯ್ಯ ಸೇರಿದಂತೆ ಹಲವು ಸದಸ್ಯರು ಗರಿಗರಿ ಪಂಜೆ, ಶರ್ಟ್ ಧರಿಸಿದ್ದರು. ವಿಧಾನಸಭೆ ನಾಮನಿರ್ದೇಶಿತ ಸದಸ್ಯೆ ವಿನಿಶಾ ನಿರೋ ಸ್ಕರ್ಟ್ ಮತ್ತು ಕೋಟ್ ಉಡುಗೆ ಧರಿಸಿದ್ದರು.

ಮೊದಲ ಬಾರಿಗೆ ಪ್ರವೇಶ: ಹೊಸಕೋಟೆ ಮತ್ತು ಶಿವಾಜಿನಗರ ಉಪಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಶರತ್ ಬಚ್ಚೇಗೌಡ ಮತ್ತು ರಿಝ್ವಾನ್ ಅರ್ಶದ್ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರಲ್ಲದೆ, ಸದನದ ಕಾರ್ಯಕಲಾಪಗಳನ್ನು ತದೇಕಚಿತ್ತರಾಗಿ ಆಲಿಸುತ್ತಿದ್ದುದು ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News