ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಗುಂಡಿಟ್ಟು ಕೊಲ್ಲಬೇಕಿತ್ತು: ಪ್ರಮೋದ್ ಮುತಾಲಿಕ್

Update: 2020-02-17 15:38 GMT

ಕಲಬುರಗಿ, ಫೆ.17: ಹುಬ್ಬಳ್ಳಿಯ ಶಿಕ್ಷಣ ಸಂಸ್ಥೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಕಾಶ್ಮೀರದ ಮೂವರು ವಿದ್ಯಾರ್ಥಿಗಳನ್ನು ಗುಂಡಿಟ್ಟು ಕೊಲ್ಲಬೇಕಿತ್ತು ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್‌ ಪರ ಘೋಷಣೆ ಕೂಗಿದ್ದಕ್ಕೆ ದೇಶದ್ರೋಹ ಪ್ರಕರಣದಡಿ ಬಂಧಿಸಿರುವುದಾಗಿ ಅಲ್ಲಿಯ ಪೊಲೀಸ್ ಕಮೀಷನರ್ ಹೇಳುತ್ತಾರೆ. ನಂತರ ನಂತರ ಬಿಡುಗಡೆ ಮಾಡುತ್ತಾರೆ. ಪುನಃ ಬಂಧಿಸುವಂತಹ ನಾಟಕವಾಡುತ್ತಿದ್ದಾರೆಂದು ಅವರು ಕಿಡಿಕಾರಿದರು.

ದೇಶದ್ರೋಹಿಗಳನ್ನು ಹುಬ್ಬಳ್ಳಿ ಕೋರ್ಟ್‌ಗೆ ಕರೆತಂದಾಗ, ಜನರು ಚಪ್ಪಲಿಯಿಂದ ಹೊಡೆದು ಒಳ್ಳೆಯ ಕೆಲಸ ಮಾಡಿದ್ದಾರೆ. ಚಪ್ಪಲಿ ಅಲ್ಲ, ಅವರ ಮೇಲೆ ಸಗಣಿ ಹಾಕಬೇಕಿತ್ತು. ದೇಶದ ಯಾವ ಕಾಲೇಜಿನಲ್ಲಿಯೂ ಅವರಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ನೀಡಬಾರದೆಂದು ಅವರು ಕರೆ ನೀಡಿದರು.

ಕಾಶ್ಮೀರ ವಿದ್ಯಾರ್ಥಿಗಳಿಗೆ ಮೊದಲಿಗೆ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿತ್ತು. ನಂತರ ಜಾಮೀನು ನೀಡಬಹುದಾದ ಸೆಕ್ಷನ್ ಹಾಕಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು, ಇಲ್ಲವೇ ಪೊಲೀಸ್ ಕಮೀಷನರ್ ದಿಲೀಪ್‌ರನ್ನು ಅಮಾನತು ಮಾಡಬೇಕೆಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News