ಪತಿಯ ಕಿರುಕುಳ ಆರೋಪ: ಕನ್ನಡದ ಹಿನ್ನೆಲೆ ಗಾಯಕಿ ಆತ್ಮಹತ್ಯೆ

Update: 2020-02-17 15:36 GMT

ಬೆಂಗಳೂರು, ಫೆ.17: ಪತಿಯ ಕಿರುಕುಳಕ್ಕೆ ನೊಂದು ಹಿನ್ನೆಲೆ ಗಾಯಕಿ ಸುಶ್ಮಿತಾ ರಾಜೇ(26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

ವರ್ಷದ ಹಿಂದೆ ಸಾಫ್ಟ್ ವೇರ್ ಇಂಜಿನಿಯರ್ ಶರತ್ ಎಂಬಾತನನ್ನು ಸುಶ್ಮಿತಾ ವಿವಾಹವಾಗಿದ್ದರು. ವರದಕ್ಷಿಣೆ ಕಿರುಕುಳಕ್ಕಾಗಿ ನೊಂದು ನಾಗರಬಾವಿಯಲ್ಲಿನ ಪತಿಯ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸುಶ್ಮಿತಾ ಶ್ರೀಸಾಮಾನ್ಯ, ಹಾಲು ತುಪ್ಪ ಸೇರಿದಂತೆ ಹಲವು ಚಲನಚಿತ್ರಗಳ ಹಾಡುಗಳಿಗೆ ಹಿನ್ನೆಲೆ ಗಾಯಕಿ ಆಗಿದ್ದರು. ಎಂಬಿಎ ಪದವೀಧರೆ ಹಾಗೂ ಸುಗಮ ಸಂಗೀತ ಗಾಯಕಿಯಾಗಿದ್ದ ಅವರು ಸಾವಿಗೂ ಮುನ್ನ ಬರೆದಿಟ್ಟಿದ್ದರು ಎನ್ನಲಾದ 'ಡೆತ್ ನೋಟ್' ಸಿಕ್ಕಿದ್ದು, ಅದರಲ್ಲಿ ದೈಹಿಕ, ಮಾನಸಿಕ ಕಿರುಕುಳ ತನ್ನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

‘ಅಮ್ಮ ಸುಮ್ಮನೆ ಬಿಡಬೇಡ’

ನನ್ನನ್ನು ಕ್ಷಮಿಸು. ನಾನೇ ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಿದ್ದೇನೆ. ನನ್ನನ್ನು ದಯವಿಟ್ಟು ಕ್ಷಮಿಸು. ಅವರ ದೊಡ್ಡಮ್ಮನ ಮಾತು ಕೇಳಿಕೊಂಡು ನನಗೆ ಅವರು ಚಿತ್ರಹಿಂಸೆ ಕೊಡುತ್ತಿದ್ದರು. ಪದೇ ಪದೇ ಮನೆ ಬಿಟ್ಟು ಹೋಗು ಅನ್ನುತ್ತಿದ್ದರು. ಮಾನಸಿಕವಾಗಿ ತುಂಬ ಹಿಂಸೆ ಆಗುತ್ತಿತ್ತು. ಅವರನ್ನು ಮಾತ್ರ ಸುಮ್ಮನೆ ಬಿಡಬೇಡ. ನನ್ನ ಸಾವಿಗೆ ಶರತ್, ವೈದೇಹಿ, ಗೀತಾ ನೇರವಾಗಿ ಕಾರಣರಾಗಿದ್ದಾರೆ. ಎಷ್ಟೇ ಬೇಡಿಕೊಂಡು, ಕಾಲು ಹಿಡಿದರೂ ಅವನ ಮನಸ್ಸು ಕರಗಲಿಲ್ಲ. ಅವರ ಮನೆಯಲ್ಲಿ ನನಗೆ ಸಾಯಲು ಇಷ್ಟವಿರಲಿಲ್ಲ. ಮದುವೆ ಆದಾಗಿನಿಂದ ಇದೇ ರೀತಿ ಹಿಂಸೆ ಮಾಡುತ್ತಿದ್ದರು. ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ನನ್ನನ್ನು ನನ್ನ ಅಮ್ಮನ ಊರಿನಲ್ಲಿಯೇ ಮಣ್ಣು ಮಾಡು ಅಥವಾ ಸುಡು. ನನ್ನ ಕಾರ್ಯವನ್ನು ನನ್ನ ತಮ್ಮನೇ ಮಾಡಲಿ. ಅವರನ್ನು ಮಾತ್ರ ಸುಮ್ಮನೆ ಬಿಡಬೇಡ.

-ಸುಶ್ಮಿತಾ ಬರೆದಿದ್ದರೆನ್ನಳಾದ ಪತ್ರದಿಂದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News