ಮಂಗಳೂರು ಪೊಲೀಸರ ವಿರುದ್ಧ ಯಾಕೆ ಎಫ್‌ಐಆರ್ ದಾಖಲಿಸಿಲ್ಲ: ಮಾಹಿತಿ ನೀಡಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2020-02-17 17:25 GMT

ಬೆಂಗಳೂರು, ಫೆ.22: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಸಂಭವಿಸಿದ್ದ ಘರ್ಷಣೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದ 22 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಮಂಗಳೂರು ಪೊಲೀಸರ ವಿರುದ್ಧ ಇಲ್ಲಿಯವರೆಗೆ ಯಾಕೆ ಎಫ್‌ಐಆರ್ ದಾಖಲಿಸಿಕೊಂಡಿಲ್ಲ ಎಂಬುದರ ಬಗ್ಗೆ ಫೆ.18ರಂದು ಮಾಹಿತಿ ನೀಡಲು ರಾಜ್ಯ ಸರಕಾರಕ್ಕೆ ಸೂಚಿಸಿದೆ. 

ಈ ಕುರಿತು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ನಾ ಅವರಿದ್ದ ನ್ಯಾಯಪೀಠ, ಆರೋಪಿಗಳಾದ ಮುಹಮ್ಮದ್ ಅಝರ್, ಅಬ್ದುಲ್ ಹಫೀಝ್, ಹರ್ಜಾನ್, ಮುಹಮ್ಮದ್ ನಝೀಮ್, ಅನ್ವರ್ ಹುಸೇನ್, ಮುಹಮ್ಮದ್ ಇಕ್ಬಾಲ್, ಕೈಸಲ್, ಜಾವಿದ್ ಅಖ್ತರ್, ಮುಹಮ್ಮದ್ ಜಿಹಾದ್, ಮುಹಮ್ಮದ್ ಫಯಾಝ್, ಮುಹಮ್ಮದ್ ಆಶೀಕ್, ಮುಹಮ್ಮದ್ ಸುಹೈಲ್, ನಾಸಿರುದ್ದೀನ್, ಮುಹಮ್ಮದ್ ಶಕೀರ್, ಕಲಂದರ್ ಬಾಷಾ ಸೇರಿ 22 ಜನರಿಗೆ ಜಾಮೀನು ಮಂಜೂರು ಮಾಡಿದೆ.

ಅರ್ಜಿದಾರರ ಪರ ವಾದಿಸಿದ ವಕೀಲ ಬಿ.ಲತೀಫ್ ಅವರು, ಇಲ್ಲಿ ಪೊಲೀಸರು ಸುಳ್ಳು ಆರೋಪ ಮಾಡಿದ್ದಾರೆ. ನಮ್ಮ ಕಕ್ಷಿದಾರರು ಭಾಗಿಯಾಗಿರುವ ಬಗ್ಗೆ ಯಾವುದೇ ಸಾಕ್ಷಿಗಳು ಪೊಲೀಸರ ಬಳಿ ಇಲ್ಲ. ಘಟನೆಯ ವೇಳೆ ನಮ್ಮ ಕಕ್ಷಿದಾರರು ಸ್ಥಳದಲ್ಲೇ ಇರಲಿಲ್ಲ. ಒಂದು ಧರ್ಮವನ್ನು ಟಾರ್ಗೆಟ್ ಮಾಡಿ ಈ ದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಪೊಲೀಸರು ಗೋಲಿಬಾರ್ ನಡೆಸಿ ದೌರ್ಜನ್ಯ ನಡೆಸಿದ್ದರೂ ಅವರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಸರಕಾರದ ಪರ ವಾದಿಸಿದ ವಕೀಲರು, ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗ ಆರೋಪಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕಷ್ಟು ಸಾಕ್ಷಾಧಾರಗಳಿವೆ. ಆರೋಪಿಗಳು ಘಟನೆಯಲ್ಲಿ ಭಾಗಿಯಾಗಿರುವ ಬಗ್ಗೆ ವೀಡಿಯೋಗಳಿವೆ. ಜತೆಗೆ ತಾಂತ್ರಿಕ ಸಾಕ್ಷಿಗಳು ನಮ್ಮ ತನಿಖೆಯಲ್ಲಿ ಪತ್ತೆಯಾಗಿವೆ ಎಂದು ಹೇಳಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತು. ಅಲ್ಲದೆ, ಮಂಗಳೂರು ಪೊಲೀಸರ ವಿರುದ್ಧ ಇಲ್ಲಿಯವರೆಗೆ ಯಾಕೆ ಎಫ್‌ಐಆರ್ ದಾಖಲಿಸಿಕೊಂಡಿಲ್ಲ ಎಂಬುದರ ಬಗ್ಗೆ ರಾಜ್ಯ ಸರಕಾರಕ್ಕೆ ಮಾಹಿತಿ ನೀಡಲು ಸೂಚಿಸಿತು.

ಪ್ರಕರಣವೇನು: ಕಳೆದ 2019ರ ಡಿ.19ರಂದು ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ಉಂಟುಮಾಡಿತ್ತು. ಅಲ್ಲದೇ, ಇಬ್ಬರು ಗೋಲಿಬಾರ್ ನಲ್ಲಿ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಹಲವರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದರು. ಪೊಲೀಸರ ಮೇಲೆ ಆರೋಪಿಗಳು ಕಲ್ಲು, ಬಾಟಲ್ ತೂರಾಟ ಮಾಡಿದ್ದರೆಂದು ಆರೋಪಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News