ನೆರೆ ಪರಿಹಾರ ನೀಡಲು ಮೃತರ ಡಿಎನ್‌ಎ ವರದಿ ಕೇಳುತ್ತಿರುವ ಅಧಿಕಾರಿಗಳು !

Update: 2020-02-17 17:11 GMT

ಬೆಂಗಳೂರು, ಫೆ. 17: ಇತ್ತೀಚೆಗೆ ಉತರ ಕರ್ನಾಟಕದಲ್ಲಿ ಸಂಭವಿಸಿದ ನೆರೆಯಲ್ಲಿ ಮೃತಪಟ್ಟವರಿಗೆ ಇದುವರೆಗೂ ಪರಿಹಾರ ನೀಡಿಲ್ಲ. ಮೃತಪಟ್ಟವರ ಡಿಎನ್‌ಎ ವರದಿ ಬಂದ ಬಳಿಕ ಪರಿಹಾರವನ್ನು ಅವರ ಕುಟುಂಬಕ್ಕೆ ನೀಡುತ್ತೇವೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ ಎಂದು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಸೋಮವಾರ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೆರೆ ಸಂತ್ರಸ್ತ ಸಂಜೀವ್ ಕಾಂಬಳೆ, ನೆರೆಯಲ್ಲಿ ಮೃತಪಟ್ಟವರಿಗೆ ಇದುವರೆಗೂ ಪರಿಹಾರ ನೀಡಿಲ್ಲ. ಮೃತಪಟ್ಟವರ ಡಿಎನ್‌ಎ ವರದಿ ಬಂದ ಬಳಿಕ ಪರಿಹಾರವನ್ನು ಅವರ ಕುಟುಂಬಕ್ಕೆ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಡಿಎನ್‌ಎನಲ್ಲಿ ಮೃತಪಟ್ಟವರು ನೆರೆಯಿಂದಲೇ ಮೃತಪಟ್ಟರು ಎಂದು ಸಾಬೀತಾದರೆ ಮಾತ್ರ ಅಧಿಕಾರಿಗಳು ಪರಿಹಾರ ಒದಗಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಯಾವ ರೀತಿಯ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಮುಧೋಳ, ಖಾನಾಪುರ ಸೇರಿದಂತೆ ಮತ್ತಿತರ ಭಾಗದಲ್ಲಿ ಹೊಲ, ಮನೆ, ಶಾಲೆ ಕಟ್ಟಡ ಹಾನಿಯಾಗಿವೆ. ಆದರೆ, ಈವರೆಗೂ ಪರಿಹಾರ ಸಿಕ್ಕಿಲ್ಲ. ತಾತ್ಕಾಲಿಕ ಹತ್ತು ಸಾವಿರ ರೂ. ಹಣವನ್ನು ಕೆಲವರಿಗೆ ಮಾತ್ರ ನೀಡಲಾಗಿದೆ. ನೆರೆ ಕುರಿತು ಸಮೀಕ್ಷೆ ಮಾಡಿದ ಸರಕಾರ ಪರಿಹಾರ ನೀಡಲು ಎ, ಬಿ, ಸಿ ಎಂದು ಮೂರು ವರ್ಗ ಮಾಡಿ ಪರಿಹಾರ ನೀಡಲು ಮುಂದಾಯಿತು. ಆದರೆ, ಸಮೀಕ್ಷೆ ಸರಿಯಾಗಿ ಮಾಡದೇ ಪೂರ್ಣ ಮನೆ ಬಿದ್ದವರನ್ನು ಸಿ ವರ್ಗಕ್ಕೆ ಸೇರಿಸಿ, ಅಲ್ಪಪ್ರಮಾಣದ ಮನೆ ಬಿದ್ದವರನ್ನು ಎ ವರ್ಗಕ್ಕೆ ಸೇರಿಸಿದ್ದಾರೆ. ಈ ಬಗ್ಗೆ ಪುನರ್ ಸಮೀಕ್ಷೆ ನಡೆಸಬೇಕು ಎಂದು ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ದೂರಿದರು.

ಪೂರ್ತಿ ಮನೆ ಬಿದ್ದವರಿಗೆ 5 ಲಕ್ಷ ರೂ. ಹಣ ಕೊಡುವುದಾಗಿ ಹೇಳಿದ ಸರಕಾರ ಮೂರು ಲಕ್ಷಕ್ಕೆ ಇಳಿಸಲು ತೀರ್ಮಾನಿಸಿದೆ. ಮನೆ ನಿರ್ಮಾಣಕ್ಕೆ ಮುಂದಾದವರಿಗೆ ಕೇವಲ ಒಂದು ಲಕ್ಷ ನೀಡಿ ಕೈತೊಳೆದುಕೊಳ್ಳಲಾಗಿದೆ. ಅವರು ಮನೆ ಕಟ್ಟಿಕೊಳ್ಳಲಾಗದೇ ಬೀದಿ ಪಾಲಾಗಿದ್ದಾರೆ. ಉತ್ತರ ಕರ್ನಾಟಕದ ಹಲವೆಡೆ ಶಾಲೆ, ಅಂಗನವಾಡಿ ಕಟ್ಟಡ ಹಾಳಾಗಿದ್ದು ಪೂರ್ತಿಯಾಗಿ ದುರಸ್ತಿ ಕಂಡಿಲ್ಲ. ಪುನರ್ವಸತಿಯಲ್ಲಿರುವ ನೂರಾರು ಮಕ್ಕಳು ಶಾಲೆಗೆ ಹೋಗಲು ನಿತ್ಯ ಐದಾರು ಕೀ. ಮಿ ನಡೆದು ಹೋಗುವ ಪರಿಸ್ಥಿತಿ ಇದೆ. ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪರಿಹಾರ ಪ್ರಕ್ರಿಯೆಯಲ್ಲಿನ ಅಧಿಕಾರಿಗಳನ್ನು ಬೇರೆಡೆ ಸ್ಥಳಾಂತರ ಮಾಡಿರುವುದು ಖಂಡನೀಯ ಎಂದರು.

ನೆರೆ ಪರಿಹಾರಕ್ಕೆ ಘೋಷಿಸಿದ ಪರಿಹಾರ ಹಣ ನೀಡಬೇಕು, ಪುನರ್ ಸಮೀಕ್ಷೆ ನಡೆಸಬೇಕು. ಬೆಳೆ ಪರಿಹಾರ ನೀಡುವ ಜತೆಗೆ ಶಾಲೆಗಳ ದುರಸ್ತಿ ಕಾರ್ಯ ಶೀಘ್ರವೇ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News