ಭೀಮ್ ಆರ್ಮಿಯ ಚಂದ್ರಶೇಖರ ಆಝಾದ್ ಫೆ.24 ರಂದು ಕರ್ನಾಟಕಕ್ಕೆ

Update: 2020-02-17 17:38 GMT

ವಿಜಯಪುರ, ಫೆ.17: ಭೀಮ್ ಆರ್ಮಿ ಸಂಘಟನೆಯ ಮುಖ್ಯಸ್ಥ, ಹೋರಾಟಗಾರ ಚಂದ್ರಶೇಖರ ಆಝಾದ್ ಫೆ.24 ರಂದು ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ವಿವಿಧ ಹೋರಾಟಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಖಾಲೀದ್ ಹುಸೇನ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿರುವ ಅವರು, ಹೋರಾಟವನ್ನೇ ಉಸಿರಾಗಿಸಿಕೊಂಡಿರುವ ಚಂದ್ರಶೇಖರ ಆಝಾದ್ ಈ ಭಾಗಕ್ಕೆ ಭೇಟಿ ನೀಡಿ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಫೆ.23 ರಂದು ಮುಂಬೈಯಿಂದ ಹೊರಟು ಫೆ.24 ರಂದು ಬೆಳಗ್ಗೆ ವಿಜಯಪುರಕ್ಕೆ ತಲುಪಲಿದ್ದಾರೆ. ಈ ಸಂದರ್ಭದಲ್ಲಿ ಚಂದ್ರಶೇಖರ ಆಝಾದ್ ಅವರನ್ನು ಹೃದಯಸ್ಪರ್ಶಿಯಾಗಿ ಕಾರ್ಯಕರ್ತರ ಪಡೆಯೊಂದಿಗೆ ಬರ ಮಾಡಿಕೊಳ್ಳಲಾಗುವುದು. 

ಫೆ.24 ರಂದು ಭೀಮ್ ಆರ್ಮಿ ಸಂಘಟನೆಯ ವಿಷಯವಾಗಿ ಸಂಘಟನೆಯ ಜಿಲ್ಲಾ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಮಧ್ಯಾಹ್ನ ನಗರದ ಮಧುವನ ಹೋಟೆಲ್ ಸಭಾಂಗಣದಲ್ಲಿ ಭೀಮ್ ಆರ್ಮಿಯ ಸಂಘಟನೆಯ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಅಂದು ಸಂಜೆ ಕೋಲಾರ ರಸ್ತೆಯಲ್ಲಿ ವಿಜಯಪುರ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆಯಲಿರುವ 'ಸಂವಿಧಾನ ಉಳಿಸಿ ಆಂದೋಲನ' ಬೃಹತ್ ಸಭೆಯಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ. ಫೆ.25 ರಂದು ನಗರದ ಜಲನಗರದಲ್ಲಿರುವ ಸಾರಿಪುತ್ರ ಬುದ್ಧವಿಹಾರಕ್ಕೆ ಭೇಟಿ ನೀಡಿ ಬುದ್ಧವಂದನೆ ಸಲ್ಲಿಸಲಿದ್ದು, ನಂತರ ಜಾಮಿಯಾ ಮಸೀದಿಗೆ ಭೇಟಿ ನೀಡಿ ಪುನ: ಮುಂಬಯಿಗೆ ವಾಪಾಸ್ ತೆರಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಭೀಮ್ ಆರ್ಮಿಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮತೀನ್‍ ಕುಮಾರ ದೇವಧರ, ಜಿಲ್ಲಾಧ್ಯಕ್ಷ ಮಲ್ಲು ಜಾಲಗೇರಿ, ನಿರ್ಮಲಾ ಹೊಸಮನಿ, ರಿಝ್ವಾನ್ ಮುಲ್ಲಾ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News