ಆರ್ಥಿಕ ಸಂಕಷ್ಟದಿಂದ 'ಸಹಕಾರ ಸಾರಿಗೆ' ಸ್ತಬ್ಧ: ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ ಕಾರ್ಮಿಕರು

Update: 2020-02-17 17:51 GMT

ಚಿಕ್ಕಮಗಳೂರು, ಫೆ.17: ಜಿಲ್ಲೆಯ ಹಲವು ಭಾಗಗಳು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಪ್ರಯಾಣಿಕರಿಗೆ ಸಹಕಾರಿಯಾಗಿದ್ದ ಕಾರ್ಮಿಕರೇ ಒಡೆಯರಾಗಿ ದಕ್ಷಿಣ ಏಷ್ಯಾದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ್ದ ಸಹಕಾರಿ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ರವಿವಾರ ಸ್ಥಗಿತಗೊಂಡಿದ್ದು, ಸಂಸ್ಥೆಯ ಕಾರ್ಮಿಕರು ಕೊಪ್ಪ ಪಟ್ಟಣದ ಸಾರಿಗೆ ಸಂಸ್ಥೆಯ ಕಚೇರಿ ಆವರಣದಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಸೋಮವಾರ ಸಹಕಾರ ಸಾರಿಗೆ ಸಂಸ್ಥೆಯ ಅಧ್ಯಕ್ಷ ಧರ್ಮಪ್ಪ, ನಿರ್ದೇಶಕ ವಿಜಯ್‍ ಕುಮಾರ್ ಸೇರಿದಂತೆ ಮೂನ್ನೂರಕ್ಕೂ ಹೆಚ್ಚು ಕಾರ್ಮಿಕರು ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಯ ಪುನಃಶ್ಚೇತನಕ್ಕೆ ಆಗ್ರಹಿಸಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯ ಸರಕಾರ ಹಾಗೂ ಸಾರಿಗೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಧರಣಿ ಉದ್ದೇಶಿಸಿ ಮಾತನಾಡಿದ ಸಹಕಾರಿ ಸಾರಿಗೆ ಸಂಸ್ಥೆಯ ಮಾಲಕರು, ಇತ್ತೀಚಿನ ಆರ್ಥಿಕ ಸಂಕಷ್ಟ, ಬಿಡಿ ಭಾಗಗಳ ಬೆಲೆ ಏರಿಕೆ, ತೈಲಬೆಲೆ ಏರಿಕೆ, ಜಿಎಸ್‍ಟಿ, ಸಿಬ್ಬಂದಿ ವೇತನ ವೆಚ್ಚ ಏರಿಕೆಯ ಹೊಡೆತ ಸಹಿಸಲಾಗದೆ ಸಾರಿಗೆ ಸಂಸ್ಥೆ ದಿವಾಳಿ ಹಂತಕ್ಕೆ ತಲುಪಿದೆ. ಸರಕಾರದ ನೆರವಿಗಾಗಿ ಸಿಎಂ ಯಡಿಯೂರಪ್ಪ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗೆ ನೀಡುವ ನೆರವನ್ನು ಸಹಕಾರಿ ಸಾರಿಗೆ ಸಂಸ್ಥೆಗೆ ವಿಸ್ತರಿಸುವ ಭರವಸೆ ನೀಡಿದ್ದರು. ಆದರೆ ಹಣಕಾಸು ಇಲಾಖೆ ಸಮ್ಮತಿ ನೀಡದಿರುವುದರಿಂದ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ. ಆದ್ದರಿಂದ ಸಂಸ್ಥೆಗೆ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಯಿತು ಎಂದು ಹೇಳಿದರು.

ಸರಕಾರದ ನೆರವು ದೊರೆಯದಿದ್ದರೆ ದೀರ್ಘಕಾಲ ಗ್ರಾಮೀಣ ಜನರ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿದ ನಮ್ಮ ಸಂಸ್ಥೆಯ ಬಸ್‍ಗಳ ಓಡಾಟ ಅಸಾಧ್ಯ. ಜೊತೆಗೆ ಸಹಕಾರಿ ತತ್ವದಡಿಯಲ್ಲಿ ಸಂಸ್ಥೆ ರಚಿಸಿಕೊಂಡು ಮಾಲಕರಾಗಿದ್ದರೂ ಕಾರ್ಮಿಕರಾಗಿ ದುಡಿಯುತ್ತಿರುವ ಸಿಬ್ಬಂದಿ ಹಾಗೂ ಅವರ ಕುಟುಂಬದ ಬದುಕು ಅಸಹನೀಯವಾಗುತ್ತದೆ. ಹೀಗಾಗಿ ಸರಕಾರದ ಮೇಲೆ ಒತ್ತಡ ಹೇರಲು ಚಳವಳಿ ಆರಂಭಿಸಿದ್ದು, ಸರಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಧರಣಿ ನಡೆಸಲಾಗುವುದು ಎಂದ ಮುಖಂಡರು, ಸರಕಾರ ನಮ್ಮ ಮನವಿಗೆ ಸ್ಪಂದಿಸಬೇಕು. ಸಹಕಾರಿ ಸಂಸ್ಥೆ ಬಸ್‍ಗಳು ಮತ್ತೆ ಬೀದಿಗಿಳಿಯಲು ನೆರವಾಗಬೇಕು. ಸರಕಾರ ತಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಚಳವಳಿ ನಿರತರು ಆಗ್ರಹಿಸಿದ್ದಾರೆ.

ಧರಣಿಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಸಹಕಾರಿ ಸಾರಿಗೆ ಸಂಸ್ಥೆ ಮಲೆನಾಡಿನ ಕೀರ್ತಿಗೆ ಕಳಸವಿಟ್ಟಂತೆ ಇತ್ತು. ಅದರ ಸಂಕಷ್ಟಕ್ಕೆ ಸರಕಾರ ಮಧ್ಯಪ್ರವೇಶ ಮಾಡಲೇಬೇಕು. ಈ ಸಂಬಂಧ ಸಿಎಂ ಅವರ ಬಳಿ ಈಗಾಗಲೇ ಚರ್ಚಿಸಲಾಗಿದ್ದು, ಅವರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆಂದು ತಿಳಿಸಿದರು.

ಧರಣಿಯಲ್ಲಿ ಸಹಕಾರಿ ಸಾರಿಗೆ ಸಂಸ್ಥೆಯ ಕಾರ್ಮಿಕರು ಹಾಗೂ ಅವರ ಕುಟುಂಬಸ್ಥರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News