ನಕಲಿ ನೋಟು ಮುದ್ರಣ ಆರೋಪ: ಇಬ್ಬರ ಬಂಧನ

Update: 2020-02-17 18:02 GMT

ಬೆಳಗಾವಿ, ಫೆ.17: ನಕಲಿ ನೋಟು ಮುದ್ರಣ ಮಾಡುತ್ತಿದ್ದ ಆರೋಪದಡಿ ನಿಪ್ಪಾಣಿ ತಾಲೂಕಿನ ಬೋರಗಾವ ಗ್ರಾಮದ ಇಬ್ಬರನ್ನು ಮುರಗೋಡ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೋರಗಾವ ಗ್ರಾಮದ ವಿಜಯ್ ಬೆಡಕಿಹಾಳ, ಅಕ್ಷಯ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, 7 ಸಾವಿರ ರೂ. ನಕಲಿ ನೋಟು, ಮುದ್ರಣ ಯಂತ್ರ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಇಲ್ಲಿನ ಸವದತ್ತಿ ತಾಲೂಕಿನ ಮುರಗೋಡ ವ್ಯಾಪ್ತಿಯಲ್ಲಿ ಇಬ್ಬರು ಯುವಕರು ನಕಲಿ ನೋಟು ಚಲಾವಣೆಗೆ ಪ್ರಯತ್ನಿಸಿದ್ದರು. ಈ ಸಂಬಂಧ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬೋರಗಾವದಲ್ಲಿ ನಕಲಿ ನೋಟು ಪಡೆದ ಬಗ್ಗೆ ಯುವಕರು ಮುರಗೋಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಬಳಿಕ ಮುರಗೋಡ ಹಾಗೂ ಸದಲಗಾ ಠಾಣೆ ಪೊಲೀಸರು ಜಂಟಿಯಾಗಿ ಬೋರಗಾವದಲ್ಲಿ ನಕಲಿ ನೋಟು ಮುದ್ರಣ ಮಾಡುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ. ಐದು ಸಾವಿರ ರೂಪಾಯಿ ಅಸಲಿ ನೋಟು ಪಡೆದು 10 ಸಾವಿರ ನಕಲಿ ನೋಟುಗಳನ್ನು ಆರೋಪಿತರು ನೀಡುತ್ತಿದ್ದರು. ಇದರ ಹಿಂದೆ ವ್ಯವಸ್ಥಿತ ಜಾಲ ಇರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News