ರಾಜ್ಯಪಾಲರ ಭಾಷಣ ಅಭಿವೃದ್ಧಿಯ ವೇಗಕ್ಕೆ ಪ್ರೇರಕ: ನಳಿನ್‌ ಕುಮಾರ್ ಕಟೀಲು

Update: 2020-02-17 18:21 GMT

ಬೆಂಗಳೂರು, ಫೆ.17: ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಮಾಡಿದ ಭಾಷಣ ಸ್ಫೂರ್ತಿದಾಯಕವಾಗಿದ್ದು, ಅಭಿವೃದ್ಧಿಯ ವೇಗಕ್ಕೆ ಪ್ರೇರಕವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರಕಾರದ ಆದ್ಯತೆಗಳು, ಬದ್ಧತೆಗಳು ಮತ್ತು ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದ್ದಾರೆ. ಮುಖ್ಯವಾಗಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರಕಾರದ ಬದ್ಧತೆಯನ್ನು ರಾಜ್ಯಪಾಲರು ಪ್ರತಿಪಾದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ರೈತರ ಕಲ್ಯಾಣ ಸರಕಾರದ ಪ್ರಮುಖ ಆದ್ಯತೆಯಾಗಿದೆ ಎಂದಿರುವುದು ಮುಖ್ಯಮಂತ್ರಿ ಯಡಿಯೂರಪ್ಪನವರ ಸರಕಾರಕ್ಕೆ ರೈತರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ನೆರೆ ಸಂತ್ರಸ್ತರ ಸಮಸ್ಯೆಯನ್ನು ಸರಕಾರ ಪರಿಣಾಮಕಾರಿಯಾಗಿ ನಿಭಾಯಿಸಿದೆ. ಕೈಗಾರಿಕಾ ಕ್ಷೇತ್ರದ ಪ್ರಗತಿಯ ಸರಕಾರದ ಆದ್ಯತೆಯನ್ನು ರಾಜ್ಯಪಾಲರು ಪ್ರಸ್ತಾಪಿಸಿರುವುದು ಸ್ವಾಗತಾರ್ಹ ಎಂದು ನಳಿನ್‌ ಕುಮಾರ್ ತಿಳಿಸಿದ್ದಾರೆ.

ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಆರು ತಿಂಗಳಲ್ಲೇ ಅನೇಕ ಅಭಿವೃದ್ಧಿಪರ, ಕೃಷಿಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಮುಂದಿನ ಮೂರು ವರ್ಷದ ಅವಧಿಯಲ್ಲಿ ಇಂತಹುದೇ ಮತ್ತಷ್ಟು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಯಾಗುವ ವಿಶ್ವಾಸವಿದೆ ಎಂದು ಅವರು ಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News