ಬಿಜೆಪಿಯೇ ಮಾಡಿಸಿದ ಆಧಾರ್‌ ಕಾರ್ಡ್ ಪೌರತ್ವ ಸಾಬೀತುಪಡಿಸಲ್ಲ: ಸಿ.ಎಂ.ಇಬ್ರಾಹಿಂ

Update: 2020-02-18 12:41 GMT

ಬೆಂಗಳೂರು, ಫೆ.28: ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ನಲ್ಲಿ ಕೇಳುವ ದಾಖಲೆಗಳು ನನ್ನನ್ನೂ ಒಳಗೊಂಡಂತೆ ಬಹುತೇಕರ ಬಳಿ ಸಿಗಲು ಸಾಧ್ಯವಿಲ್ಲ. ಹೀಗಾಗಿ ದೇಶದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಕೇಂದ್ರ ಸರಕಾರ ಮುಸ್ಲಿಂ ಬುದ್ಧಿಜೀವಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‌ನ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಒತ್ತಾಯಿಸಿದರು.

ಮಂಗಳವಾರ ವಿಧಾನಪರಿಷತ್‌ನಲ್ಲಿ ಮಾತನಾಡಿದ ಅವರು, ನನ್ನ ಪಾಸ್‌ಪೋರ್ಟ್ ನೋಡಿ ವಿದೇಶಿ ಅಧಿಕಾರಿಗಳು ಭಾರತೀಯನೆಂದು ಗುರುತಿಸುತ್ತಾರೆ. ದೇಶದ ಜನತೆಯ ಬಳಿ ಬಿಜೆಪಿಯೇ ಮಾಡಿಸಿರುವ ಆಧಾರ್‌ ಕಾರ್ಡ್ ಇದೆ. ಆದರೆ, ಇದ್ಯಾವುದು ಎನ್‌ಪಿಆರ್, ಎನ್‌ಆರ್‌ಸಿಗೆ ಅನ್ವಯವಾಗುವುದಿಲ್ಲವೆಂದರೆ ಜನತೆ ಆತಂಕಕ್ಕೆ ಒಳಗಾಗುವುದು ಸಹಜವೇ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಶೋಚನೀಯವೆಂದು ತಿಳಿಸಿದರು.

ಎನ್‌ಆರ್‌ಸಿಯಡಿ ನನ್ನ ಅಪ್ಪನ ದಾಖಲೆ ಪತ್ರ ಸಲ್ಲಿಸಲು ಕೇಳಿದರೆ, ಎಲ್ಲಿಂದ ತಂದುಕೊಡಲು ಸಾಧ್ಯ. ನನ್ನ ರೀತಿಯೇ ದೇಶದ ಬಹುತೇಕ ಜನತೆಯ ಬಳಿ ಅಂತಹ ದಾಖಲೆಗಳು ಇಲ್ಲವಾಗಿದೆ. ಹೀಗಾಗಿ ದೇಶಾದ್ಯಂತ ಜನತೆ ಸ್ವಯಂಪ್ರೇರಿತರಾಗಿ ಹೋರಾಟ ಮಾಡುತ್ತಿದ್ದಾರೆಂದು ಅವರು ಹೇಳಿದರು.

ಪ್ರತಿಭಟನೆಗೆ ಅವಕಾಶ ನೀಡಿ: ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಮೂಲಭೂತ ಹಕ್ಕಾಗಿದೆ. ಅದರಲ್ಲೂ ಮುಸ್ಲಿಂ ಸಮುದಾಯ ತ್ರಿವರ್ಣ ಧ್ವಜ ಹಿಡಿದು ಸಂವಿಧಾನದ ಉಳಿವಿಗಾಗಿ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟಗಳಲ್ಲಿ ಬಿಜೆಪಿ ನಾಯಕರು ಭಾಗವಹಿಸಲಿ. ಅವಶ್ಯವಿದ್ದರೆ, ನಾನೇ ಒಂದು ಪ್ರತಿಭಟನಾ ಸಮಾವೇಶ ಆಯೋಜನೆ ಮಾಡುತ್ತೇನೆಂದು ಅವರು ಹೇಳಿದರು.

ಸಿಎಎ ವಿರುದ್ದ ಕಲಬುರಗಿ, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಪ್ರತಿಭಟನೆಗಳು ನಡೆದವು. ಎಲ್ಲಿಯೂ ಗಲಾಟೆ ಆಗಿಲ್ಲ. ಆದರೆ, ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಗಲಾಟೆಯಾಗಿದೆ. ಅಲ್ಲಿರುವುದು ಬಿ.ಎಸ್.ಯಡಿಯೂರಪ್ಪ ಸರಕಾರವಲ್ಲ. ಬೇರೆಯೇ ಸರಕಾರವಿದೆ ಎಂದು ಅವರು ಟೀಕಿಸಿದರು.

ರಾಜ್ಯದಲ್ಲಿ ನಡೆಯುವ ಚುನಾವಣೆಗಳು ಹಿಂದೂ-ಮುಸ್ಲಿಂ ಹೆಸರಿನಲ್ಲಿ ಆಗುವುದಿಲ್ಲ. ಬದಲಿಗೆ, ವೀರಶೈವ ಲಿಂಗಾಯತ, ಒಕ್ಕಲಿಗ, ದಲಿತ, ಹಿಂದುಳಿದ ವರ್ಗ ಹೆಸರಿನಲ್ಲಿ ನಡೆಯುತ್ತವೆ. ಯಡಿಯೂರಪ್ಪನವರ ಬೆನ್ನಿಗೆ ವೀರಶೈವ-ಲಿಂಗಾಯತರಿದ್ದಾರೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಬಸವಣ್ಣ, ಸೂಫಿ ಸಂತರ ನಾಡಲ್ಲಿ ಹಿಂದೂ-ಮುಸ್ಲಿಂ ಭೇದಭಾವ ಮಾಡುವುದು ಸರಿಯಲ್ಲವೆಂದು ಅವರು ತೀಕ್ಷ್ಣವಾಗಿ ಹೇಳಿದರು.

ಸಿಎಎ ವಿರುದ್ಧದ ಪ್ರತಿಭಟನಾಕಾರರನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪಂಕ್ಚರ್ ಹಾಕುವವರು, ಒಂದಕ್ಷರ ಗೊತ್ತಿಲ್ಲದವರು ಎಂದು ಲೇವಡಿ ಮಾಡುತ್ತಾರೆ. ನಮ್ಮ ಸಮುದಾಯದವರು ಕಾಯಕ ಜೀವಿಗಳು. ಕಾಯಕವನ್ನೇ ನಂಬಿ ಬದುಕಿದವರು. ಜನಪ್ರತಿನಿಧಿಯೊಬ್ಬ ಮಾತನಾಡುವ ಮುನ್ನ ಎಚ್ಚರ ವಹಿಸಲಿ ಎಂದ ಅವರು,  ದೇಶದ ದಲಿತರಿಗೆ ಪೌರತ್ವ ಕೊಡುವುದಕ್ಕೆ ಕಾಂಗ್ರೆಸ್ ವಿರೋಧಿಸುತ್ತಿದೆಯೆಂದು ಮತ್ತೊಬ್ಬ ಬಿಜೆಪಿ ನಾಯಕ ಸಂತೋಷ್ ಹೇಳುತ್ತಾರೆ. ಹಾಗಾದರೆ, ಈ ದೇಶದ ಮೂಲ ನಿವಾಸಿಗಳಾದ ದಲಿತರು, ಹಿಂದುಳಿದ ಸಮುದಾಯದವರು ವಲಸಿಗರೆ. ಬಿಜೆಪಿ ನಾಯಕರು ದೇಶದ ಜನತೆಯಲ್ಲಿ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ನಾಯಕರು ಪೊಲೀಸರನ್ನು ನಂಬಬಾರದು. ಅವರು ಸೂರ್ಯಕಾಂತಿ ಹೂ ಇದ್ದಂಗೆ. ಅಧಿಕಾರ ಇರುವ ಕಡೆಗೆ ವಾಲುತ್ತಾರೆ. ಈ ದೇಶದ ಭ್ರಷ್ಟಾಚಾರಕ್ಕೆ ರಾಜಕಾರಣಿಗಳಿಗಿಂತ ಅಧಿಕಾರಿಗಳ ಪಾಲು ದೊಡ್ಡದು. ಜನಪ್ರತಿನಿಧಿಗಳು ಇವತ್ತು ಇದ್ದು, ನಾಳೆ ಹೋಗುವವರು. ಅಧಿಕಾರಿಗಳು ಹತ್ತಾರು ವರ್ಷ ಅಧಿಕಾರ ನಡೆಸುವವರು ಎಂದು ಸಿ.ಎಂ ಇಬ್ರಾಹಿಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News